ADVERTISEMENT

ರಾಮನಗರ | ಭೂ ಸ್ವಾಧೀನ ವಿರೋಧಿಸಿ ಭೈರಮಂಗಲ ಬಂದ್

ಬಿಡದಿ ಸಮಗ್ರ ಉಪನಗರ ಯೋಜನೆಗೆ ವಿರೋಧ: ಪ್ರತಿಭಟನೆಯಲ್ಲಿ ನಟ ಚೇತನ್ ಭಾಗಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 21:23 IST
Last Updated 21 ಜುಲೈ 2025, 21:23 IST
ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ಸೋಮವಾರ ಭೈರಮಂಗಲ-ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘದ ವತಿಯಿಂದ ಬಂದ್ ಆಚರಿಸಿ ರಸ್ತೆ ತಡೆ ನಡೆಸಲಾಯಿತು
ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ಸೋಮವಾರ ಭೈರಮಂಗಲ-ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘದ ವತಿಯಿಂದ ಬಂದ್ ಆಚರಿಸಿ ರಸ್ತೆ ತಡೆ ನಡೆಸಲಾಯಿತು   

ಬಿಡದಿ (ರಾಮನಗರ): ಬಿಡದಿ ಸಮಗ್ರ ಉಪನಗರ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ, ಇಲ್ಲಿನ ಗ್ರಾಮ ಪಂಚಾಯಿತಿ ಕೇಂದ್ರವಾದ ಭೈರಮಂಗಲ ಗ್ರಾಮವನ್ನು ಸೋಮವಾರ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ಭೈರಮಂಗಲ-ಕಂಚುಗಾರನಹಳ್ಳಿ ರೈತರ ಹಿತರಕ್ಷಣಾ ಸಂಘ ನೀಡಿದ್ದ ಬಂದ್‌ನಲ್ಲಿ ಉಪನಗರ ಯೋಜನೆ ವ್ಯಾಪ್ತಿಯ ರೈತರು, ರೈತ ಸಂಘದ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸಿನಿಮಾ ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಂದ್ ಹಿನ್ನೆಲೆಯಲ್ಲಿ ಔಷಧ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳು ಬಂದ್ ಆಗಿದ್ದವು.

ಗ್ರಾಮವನ್ನು ಹಾದು ಹೋಗಿರುವ ಮುಖ್ಯರಸ್ತೆಯನ್ನು ತಡೆದ ಪ್ರತಿಭಟನಾಕಾರರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಯನ್ನು ಕೈ ಬಿಟ್ಟು ಭೂ ಸ್ವಾಧೀನಕ್ಕೆ ಹೊರಡಿಸಿರುವ ನೋಟಿಫಿಕೇಷನ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಿಭಟನಾಕಾರರು ಹಸುಗಳು ಮತ್ತು ಎತ್ತಿನಗಾಡಿಯನ್ನು ಸಹ ರಸ್ತೆಗೆ ತಂದು ಸುಮಾರು ಒಂದು ತಾಸು ರಸ್ತೆ ತಡೆ ನಡೆಸಿದ್ದರಿಂದಾಗಿ, ಸಾರಿಗೆ ಬಸ್‌ಗಳು ಸೇರಿದಂತೆ ಹಲವು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ತಾಸಿನವರೆಗೆ ನಿಂತವು. ಇದರಿಂದಾಗಿ, ಪ್ರಯಾಣಿಕರು ಹಾಗೂ ವಾಹನಗಳ ಸವಾರರು ತೊಂದರೆ ಅನುಭವಿಸಿದರು.

ನಟ ಚೇತನ್ ಮಾತನಾಡಿ, ‘ಬಂಡವಾಳಶಾಹಿಗಳೇ ರೈತರ ಶತ್ರುಗಳು. ಸರ್ಕಾರ ಕೂಡ ಅವರ ಪರವಾಗಿಯೇ ಇದೆ. ಫಲವತ್ತಾದ ರೈತರ ಭೂಮಿ ಕಬಳಿಸಿ ಅಲ್ಲಿ ವಿಮಾನ ನಿಲ್ದಾಣ, ಅಪಾರ್ಟ್‌ಮೆಂಟ್, ಈಜುಕೊಳ ಸೇರಿದಂತೆ ಬಂಡವಾಳಶಾಹಿಗಳ ಐಷಾರಾಮಿ ಬದುಕಿಗೆ ಬೇಕಾದ್ದನ್ನು ನಿರ್ಮಾಣ ಮಾಡಿ ಬಡ ಜನರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಸರ್ಕಾರ ಭೂ ಸ್ವಾಧೀನ ಕೈ ಬಿಡಬೇಕು’ ಎಂದು ಆಗ್ರಹಹಿಸಿದರು.

ರೈತ ಸಂಘದ ನಾಗೇಶ್, ‘ರೈತರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ಹಲವು ಸರ್ಕಾರಗಳು ಬಿದ್ದು ಹೋಗಿವೆ. ಇಲ್ಲಿನ ರೈತರ ಹೋರಾಟಕ್ಕೆ ಕಿವಿಗೊಡದಿದ್ದರೆ ರಾಜ್ಯ ಸರ್ಕಾರಕ್ಕೂ ಅದೇ ಗತಿ ಬರಲಿದೆ. ಸ್ಥಳೀಯರು ಭೂ ಸ್ವಾಧೀನ ವಿರೋಧಿಸುತ್ತಿದ್ದರೂ ಇಲ್ಲಿನ ಶಾಸಕ ಬಾಲಕೃಷ್ಣ ಗ್ರಾಮಗಳಿಗೆ ಬಂದು ಅಹವಾಲು ಆಲಿಸಿಲ್ಲ. ರೈತರಿಗೆ ವಿರುದ್ಧವಾಗಿ ನಡೆದ ಯಾವ ಸರ್ಕಾರವು ಉಳಿಯದು’ ಎಂದು ಎಚ್ಚರಿಕೆ ನೀಡಿದರು.

ಬಂದ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತ ಸಂಘದ ಭೈರೇಗೌಡ, ಪ್ರಕಾಶ್, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ, ಹೋರಾಟ ಸಮಿತಿಯ ಪ್ರಕಾಶ್, ನಾಗರಾಜು, ಜನತಾ ಪಕ್ಷದ ಮಹಿಳಾ ಅಧ್ಯಕ್ಷೆ ವಾಣಿ, ಧಮ್ಮ ದೀವಿಗೆ‌ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ, ಅವತಾರ ಶಿವು, ಮಾದೇಗೌಡ ಹಾಗೂ ಇತರರು ಇದ್ದರು.

ಉಪನಗರದ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತರ ಭೂಮಿಯನ್ನ ಕಬಳಿಸಲು ಮುಂದಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ರೈತ ಮತ್ತು ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕಿದೆ
– ಚೇತನ್ ಸಿನಿಮಾ ನಟ
ಬಿಡದಿ ಉಪನಗರಕ್ಕೆ ಗುರುತಿಸಿರುವ ಭೂಮಿ ಪೈಕಿ ಸಾವಿರ ಎಕರೆಯನ್ನು ಕೆಐಎಡಿಬಿ ಕೊಟ್ಟಾಗ ಯಾಕೆ ಹೋರಾಡಲಿಲ್ಲ? ಈಗ ನನ್ನ ಅವಧಿಯಲ್ಲಿ ಉಪನಗರವಾಗುತ್ತಿರುವ ಕಾರಣಕ್ಕೆ ಈ ಹೋರಾಟವೇ? –
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಜಿಲ್ಲಾಧಿಕಾರಿ ಬರಲೆಂದು ಪಟ್ಟು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೆ ರಸ್ತೆ ತಡೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಪೊಲೀಸರು ‘ಜಿಲ್ಲಾಧಿಕಾರಿ ಅವರು ಕನಕಪುರದಲ್ಲಿ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿದ್ದಾರೆ. ಹಾಗಾಗಿ ತಹಶೀಲ್ದಾರ್ ಬರಲಿದ್ದಾರೆ’ ಎಂದು ಮನವೊಲಿಸಿದರು. ತಹಶೀಲ್ದಾರ್ ತೇಜಸ್ವಿನಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರು ರಸ್ತೆ ತಡೆ ನಿಲ್ಲಿಸಿದರು. ಬೃಹತ್ ಪ್ರತಿಭಟನೆ ಹೆದ್ದಾರಿ ತಡೆಗೆ ನಿರ್ಣಯ ರಸ್ತೆ ತಡೆ ಬಳಿಕ ಸಭೆ ನಡೆಸಿದ ಪ್ರತಿಭಟನಾಕಾರರು ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಚರ್ಚಿಸಿದರು. ಆ. 11ರಿಂದ ಶುರುವಾಗಲಿರುವ ವಿಧಾನಮಂಡಲ‌ ಅಧಿವೇಶನದಲ್ಲಿ ಉಪನಗರ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳದಂತೆ ಸರ್ಕಾರದ ಗಮನ ಗಮನ ಸೆಳೆಯಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಉಪನಗರಕ್ಕೆ ಶೇ 75ರಷ್ಟು ರೈತರ‌ ಒಪ್ಪಿಗೆ: ಡಿಸಿಎಂ ‘ಬಿಡದಿ ಸಮಗ್ರ ಉಪನಗರ ಯೋಜನೆ ನನ್ನದಲ್ಲ. ಅದಕ್ಕೆ ಭೂಮಿಯನ್ನು ನೋಟಿಫೈ ಮಾಡಿದ್ದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ. ನಾನೀಗ ಅದನ್ನು ಡಿನೋಟಿಫೈ ಮಾಡಲು ಬರುವುದಿಲ್ಲ. ಉಪನಗರ ಯೋಜನೆಗೂ ಶೇ 75ರಷ್ಟು ರೈತರು ಒಪ್ಪಿಗೆ ನೀಡಿ ಪರಿಹಾರ ಕೊಡಿ ಎಂದಿದ್ದಾರೆ. ನಮ್ಮ ರೈತರೊಂದಿಗೆ ಚರ್ಚಿಸಿ ಮನವರಿಕೆ ಮಾಡಿಕೊಡುವೆ. ಅವರಿಗೆ ಅನ್ಯಾಯವಾಗದಂತೆ ಯಾವ ರೀತಿ ನ್ಯಾಯ ಒದಗಿಸಬೇಕು ಎಂಬುದು ಗೊತ್ತಿದೆ. ರೈತರಿಗೆ ಸಹಾಯ ಮಾಡುವುದಕ್ಕಾಗಿಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಡಿ.ಕೆ. ಸುರೇಶ್ ಅವರನ್ನು ಸದಸ್ಯರನ್ನಾಗಿ ಮಾಡಿದ್ದೇನೆ’ ಎಂದು ಭೂ ಸ್ವಾಧೀನ ವಿರೋಧಿಸಿ ಭೈರಮಂಗಲದಲ್ಲಿ ನಡೆದ ಬಂದ್ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.