ಬಿಡದಿ (ರಾಮನಗರ): ಇಲ್ಲಿನ ಕೈಗಾರಿಕಾ ಪ್ರದೇಶದ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಬಿಸಿ ಬೂದಿ ಸಿಡಿದು ಸಂಭವಿಸಿದ್ದ ಅವಘಡದಲ್ಲಿ ಗಾಯಗೊಂಡು ಸಾವು –ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದ ಕಡೆಯ ಕಾರ್ಮಿಕ ಸಹ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಸತ್ತವರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಗಾಯಾಳುಗಳೆಲ್ಲರೂ ಜೀವ ಕಳೆದುಕೊಂಡಿದ್ದಾರೆ.
ಬಿಹಾರ ದರ್ಭಂಗ ಜಿಲ್ಲೆಯ ಸಂಟೂನ ಸದಾಯ್ (30) ಮೃತ ಕಾರ್ಮಿಕ. ಜ. 4ರಂದು ಸಂಭವಿಸಿದ್ದ ಅವಘಡದಲ್ಲಿ ಗಾಯಗೊಂಡಿದ್ದ ಸದಾಯ್, ಘಟನೆ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ದೂರುದಾರರೂ ಆಗಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸದಾಯ್ ಸೇರಿದಂತೆ ಅಮಲೇಶ್, ಲಖನ್, ತರುಣ್ ಕುಮಾರ್ ಹಾಗೂ ಉಮೇಶ್‌ಕುಮಾರ್ ಸಿಂಗ್ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಸುಟ್ಟ ಗಾಯಗಳಾಗಿದ್ದರಿಂದ ನಾಲ್ವರು ಕಾರ್ಮಿಕರು ಒಂದೇ ವಾರದಲ್ಲಿ ಕೊನೆಯುಸಿರೆಳೆದಿದ್ದರು.
ಕೈ ಮತ್ತು ಕಾಲುಗಳು ಹೆಚ್ಚು ಸುಟ್ಟಿದ್ದ ಸದಾಯ್ ಅವರಿಗೆ ಚಿಕಿತ್ಸೆ ಮುಂದುವರಿದಿತ್ತು. ಇತ್ತೀಚೆಗೆ ಜೆ.ಪಿ. ನಗರದಲ್ಲಿರುವ ಕ್ಷೇಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಜ. 16ರಂದು ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ನಡೆಸಿ, ಸದಾಯ್ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು. ಏರ್ ಆಂಬುಲೆನ್ಸ್ ಮೂಲಕ ಕುಟುಂಬದವರನ್ನು ಸ್ವಗ್ರಾಮಕ್ಕೆ ಶವ ತೆಗೆದುಕೊಂಡು ಹೋದರು ಎಂದು ಮೂಲಗಳು ಹೇಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸ್ಥಾವರದ ವ್ಯವಸ್ಥಾಪಕ ಐಎಸ್‌ಜಿಇಸಿ ಕಂಪನಿಯ ಸುಧೀರ್ ಪಾಠಕ್ ಎಂಬಾತನನ್ನು ಜ. 7ರಂದೇ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ತನಿಖೆಗೆ ಹೈಕೋರ್ಟ್ ತಡೆ
ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಕೆಪಿಸಿ ಗ್ಯಾಸ್ ಪವರ್ ಕಾರ್ಪೋರೇಷನ್ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್ ಸೂರ್ಯಕಾಂತ್ ಕಬಾಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು ಪ್ರಕರಣದ ದೂರುದಾರರೂ ಆದ ಪ್ರತಿವಾದಿ ಸಂಟೂನ ಸದಾಯ್ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಲಾಗಿದೆ. ಪ್ರಕರಣದ ತನಿಖೆಗೆ ಹೈಕೋರ್ಟ್ ಇದೇ 15ರಂದು ಮಧ್ಯಂತರ ತಡೆ ಆದೇಶ ನೀಡಿದೆಯಾದರೂ ಈ ಆದೇಶ ಹೊರಬಿದ್ದ ಮರುದಿನವೇ ಸದಾಯ್ ಮೃತಪಟ್ಟಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.