ADVERTISEMENT

‘ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ’

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಅನಿತಾರಿಂದ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 13:33 IST
Last Updated 16 ಜನವರಿ 2019, 13:33 IST

ರಾಮನಗರ: ಮೈತ್ರಿ ಸರ್ಕಾರಕ್ಕೆ ಸಂಚಕಾರ ತರಲು ಹೊರಟಿರುವ ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ನಾಗೋಹಳ್ಳಿ ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿಯು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಪ್ರಯತ್ನ ಫಲ ನೀಡುವುದೂ ಇಲ್ಲ. ಜೆಡಿಎಸ್ ಶಾಸಕರು ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್‍ ನಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಆ ಪಕ್ಷದ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ಬಿಜೆಪಿಯಿಂದ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆದರೂ, ಸರ್ಕಾರಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆ ಇಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.

ADVERTISEMENT

ಮೂಲ ಸೌಕರ್ಯಕ್ಕೆ ಒತ್ತು: ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶಾಲಾ ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ.ಶಿವಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಎನ್. ಲಕ್ಷ್ಮೀಕಾಂತ್‌, ಭದ್ರಯ್ಯ, ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪಾಂಡುರಂಗ, ಉಪಾಧ್ಯಕ್ಷ ಜಿ.ಪಿ. ಗಿರೀಶ್ ವಾಸು, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಇಒ ಬಾಬು, ತಹಶೀಲ್ದಾರ್ ರಾಜು, ಎಇಇ ಪ್ರಸನ್ನ, ಬಿಇಒ ಬಿ.ಎನ್. ಮರೀಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಚ್.ಸಿ. ರಾಜಣ್ಣ, ಎಚ್.ಎಸ್ ದೇವರಾಜು, ಎಸ್. ಮಹೇಶ್, ಬೋರಯ್ಯ, ಗೋಪಾಲನಾಯ್ಕ, ಕೋಟಳ್ಳಿ ರಾಮಚಂದ್ರ, ಜಯಕುಮಾರ್‌, ವಕೀಲ ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.