ADVERTISEMENT

ಯೋಗೇಶ್ವರ್‌ ಸ್ಪರ್ಧೆಗೆ ಕಾರ್ಯಕರ್ತರ ಆಗ್ರಹ

ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸುತ್ತಾರ ಸಿಪಿವೈ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:05 IST
Last Updated 13 ಮಾರ್ಚ್ 2019, 20:05 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗುವಂತೆ ಪಕ್ಷದ ಕಾರ್ಯಕರ್ತರು ಚನ್ನಪಟ್ಟಣದ ಮುಖಂಡ ಸಿ.ಪಿ. ಯೋಗೇಶ್ವರ್ ಮೇಲೆ ಒತ್ತಡ ಹೇರತೊಡಗಿದ್ದಾರೆ. ಆದರೆ ಸಿಪಿವೈ ಈ ಬಗ್ಗೆ ಇನ್ನೂ ನಿಲುವು ಸ್ಪಷ್ಟಪಡಿಸಿಲ್ಲ.

ಕ್ಷೇತ್ರ ಪುನರ್‌ವಿಂಗಡನೆ ಬಳಿಕ 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯೋಗೇಶ್ವರ್ ಇದೇ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಎದುರು ಸ್ಪರ್ಧಿಸಿದ್ದರು. ಗೆಲುವು ಸಾಧ್ಯವಾಗದೇ ಹೋದರೂ 3.63 ಲಕ್ಷ ಮತ ಗಳಿಕೆಯ ಮೂಲಕ ಉತ್ತಮ ಪೈಪೋಟಿ ನೀಡಿದ್ದರು. ಈ ಅನುಭವವನ್ನೇ ಬಳಸಿಕೊಂಡು ಮತ್ತೊಮ್ಮೆ ಸ್ಪರ್ಧೆ ಮಾಡಬೇಕು. ಇದರಿಂದ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದಂತೆ ಆಗುತ್ತದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಸ್ಪರ್ಧೆಗೆ ನಿಂತರೆ ಬೆಂಬಲ: ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ , ಸಿಪಿವೈ ಅಭ್ಯರ್ಥಿಯಾದರೆ ನಮ್ಮೆಲ್ಲರ ಬೆಂಬಲ ಇದೆ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಕರ್ತರೊಟ್ಟಿಗೆ ಮಾತನಾಡಿದ ಅವರು ‘ಯೋಗೇಶ್ವರ್‌ ಅವರೇ ನಮ್ಮ ಅಭ್ಯರ್ಥಿ ಆದರೆ ಒಳ್ಳೆಯದು. ಪಕ್ಷದ ಹೈಕಮಾಂಡ್‌ ಸಹ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ’ ಎಂದರು.

ADVERTISEMENT

‘ಯೋಗೇಶ್ವರ್‌ ಸ್ಪರ್ಧೆಗೆ ಇಳಿದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ಸೋಲುವುದು ಖಚಿತ. ಆದರೆ ಸಿಪಿವೈ ಇನ್ನೂ ಕಳೆದ ವಿಧಾನಸಭೆ ಚುನಾವಣೆಯ ಸೋಲಿನಿಂದ ಹೊರಬಂದಿಲ್ಲ. ಇನ್ನೆರಡು ದಿನದಲ್ಲಿ ಅಭ್ಯರ್ಥಿ ಯಾರೆಂದು ತೀರ್ಮಾನ ಆಗಲಿದೆ. ಅವರ ಸ್ಪರ್ಧೆಗೆ ಪಕ್ಷದ ಜಿಲ್ಲೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲ ಇದೆ’ ಎಂದು ಹೇಳಿದರು.


ಮಂಡ್ಯ ಅಭ್ಯರ್ಥಿಯಾಗುತ್ತಾರ?
ಮಂಡ್ಯ ಕ್ಷೇತ್ರದಲ್ಲಿ ಸದ್ಯ ನಡೆದಿರುವ ರಾಜಕೀಯ ಗೊಂದಲದ ಲಾಭ ಪಡೆಯಲು ಬಿಜೆಪಿ ಉದ್ದೇಶಿಸಿದ್ದು. ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಇದೆ. ಯೋಗೇಶ್ವರ್‌ ನೆರೆಯ ಜಿಲ್ಲೆಯವರಾಗಿದ್ದು, ಮಂಡ್ಯ ಜಿಲ್ಲೆಯ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರ ಹೆಸರೂ ಚಾಲ್ತಿಯಲ್ಲಿ ಇದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಯೋಗೇಶ್ವರ್‌ ಚನ್ನಪಟ್ಟಣಕ್ಕೆ ಬದಲಾಗಿ ಮದ್ದೂರಿನಿಂದ ಸ್ಪರ್ಧಿಸುತ್ತಾರೆ ಎಂದೂ ಸುದ್ದಿ ಹಬ್ಬಿತ್ತು.

ಯೋಗೇಶ್ವರ್‌ ಅವರೇ ಅಭ್ಯರ್ಥಿಯಾಗಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯ. ಅದಕ್ಕೆ ಜಿಲ್ಲೆಯ ಎಲ್ಲ ಕಾರ್ಯಕರ್ತರ ಸಹಮತ ಇದೆ
-ಎಂ. ರುದ್ರೇಶ್‌
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.