
ಚನ್ನಪಟ್ಟಣ: ನಗರದಲ್ಲಿ ನಡೆಯುತ್ತಿರುವ ಬೊಂಬೆನಾಡ ಗಂಗೋತ್ಸವಕ್ಕೆ ಶನಿವಾರ ಗ್ರಾಮ ದೇವತೆಗಳು ಹಾಗೂ ಜಾನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆ, ಮ್ಯಾರಾಥಾನ್, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಮೆರುಗು ನೀಡಿದವು.
ಶಾಸಕ ಸಿ.ಪಿ. ಯೋಗೇಶ್ವರ್ ಬೆಳಗ್ಗೆ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ, ತಾವು ಸಹ ಓಟದಲ್ಲಿ ಪಾಲ್ಗೊಂಡರು. ಮಂಗಳವಾರಪೇಟೆಯಿಂದ ಆರಂಭವಾದ ಓಟ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಾಗಿತು. ನಗರಸಭಾ ಅಧ್ಯಕ್ಷ ವಾಸಿಲ್ ಆಲಿಖಾನ್, ಸದಸ್ಯರು, ಕಾಂಗ್ರೆಸ್ ಮುಖಂಡರು ಓಟದಲ್ಲಿ ಪಾಲ್ಗೊಂಡಿದ್ದರು.
ಆನೆಯ ಮೇಲೆ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಅದ್ಧೂರಿ ಮೆರವಣಿಗೆ ಗಮನ ಸೆಳೆಯಿತು. ಮಂಗಳವಾರಪೇಟೆಯ ಬಸವನಗುಡಿಯ ಬಳಿ ಆನೆಯ ಮೇಲಿನ ಉತ್ಸವ ಮೂರ್ತಿ ಹಾಗೂ ವಿವಿಧ ಗ್ರಾಮಗಳಿಮದ ಆಗಮಿಸಿದ್ದ ಗ್ರಾಮ ದೇವತೆಗಳ ಮೂರ್ತಿಗಳಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಾಗಿ ವೇದಿಕೆ ತಲುಪಿತು.
ಗಾರುಡಿ ಗೊಂಬೆ, ಲಂಬಾಣಿ ಮಹಿಳೆಯರ ವೇಷತೊಟ್ಟ ಮಹಿಳೆಯರು, ಕಹಳೆ, ಕೊಂಬು, ತಮಟೆ ನಗಾರಿ ನೃತ್ಯ, ಕೋಳಿ ಕುಣಿತ, ಯಕ್ಷಗಾನ ಕಲಾವಿದರು, ವೀರಗಾಸೆ, ಗಧೆ ಹೊತ್ತ ಹನುಮಂತನ ಛದ್ಮವೇಷಧಾರಿ ಮೆರವಣಿಗೆಗೆ ಮೆರುಗು ನೀಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿಉತ್ತಮ ಅಂಕ ಗಳಿಸಿದ ತಾಲ್ಲೂಕಿನ ವಿವಿಧ ಶಾಲೆ, ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿವಿಧ ಸ್ಪರ್ಧೆ:
ಸ್ಥಳದಲ್ಲೆ ಚಿತ್ರ ಬಿಡಿಸುವ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆ, ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯ, ಜಾನಪದ ಹಾಗೂ ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ಕಾರ್ಯಕ್ರಮ ನಡೆದವು.
ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ, ಶೀಲಾ ಯೋಗೇಶ್ವರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್ ಕುಮಾರ್, ಪಿ.ಡಿ. ರಾಜು, ಕರಣ್ ಆನಂದ್ ಭಾಗವಹಿಸಿದ್ದರು.
ಭಾನುವಾರ ಬೆಳಗ್ಗೆಯಿಂದ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ರಸಸಂಜೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಟಿಯರು, ಹಿನ್ನೆಲೆ ಗಾಯಕರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.