ರಾಮನಗರ: ತಮಿಳುನಾಡಿನ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಆರ್ಮ್ ಸ್ಟ್ರಾಂಗ್ ಹತ್ಯೆ ಖಂಡನೀಯ. ಕೊಲೆ ಹಿಂದೆ ಕಾಣದ ಕೈಗಳಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಅಲ್ಲಿನ ಸರ್ಕಾರ ಪ್ರಕರಣವನ್ನು ಸಿಬಿಗೆ ವಹಿಸಬೇಕು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ವಲಯ ಉಸ್ತುವಾರಿ ಎಂ. ನಾಗೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈನ ಜನನಿಬಿಡ ವಸತಿ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರ ಕೊಲೆ ನಡೆದರುವುದು, ಆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕೊಲೆ ಮಾಡಿದವರು ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಶರಣಾಗಿರುವುದನ್ನು ನೋಡಿದರೆ, ಕೊಲೆ ಹಿಂದೆ ಪ್ರಭಾವಿಗಳ ಕೈವಾಡವಿರುವ ಅನುಮಾನ ದಟ್ಟವಾಗಿದೆ ಎಂದು ಹೇಳಿದ್ದಾರೆ.
ಜಾತಿ ದೌರ್ಜನ್ಯ, ಅಸಮಾನತೆ, ಅಸ್ಪೃಶ್ಯತೆ, ಅನ್ಯಾಯದ ವಿರುದ್ಧ ದನಿ ಎತ್ತುತ್ತಾ ಬಂದಿದ್ದ ಆರ್ಮ್‌ಸ್ಟ್ರಾಂಗ್ ಅವರು, ತಳ ಸಮುದಾಯಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿದ್ದರು. ಕೊಲೆ ಬಳಿಕ ಅವರ ತೇಜೋವಧೆ ಮಾಡುವ ಸುದ್ದಿ ಬಿತ್ತರಿಸಿರುವುದು, ಕೊಲೆಯು ರಾಜಕೀಯ ಪ್ರೇರಿತವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಮ್‌ಸ್ಟ್ರಾಂಗ್ ಹತ್ಯೆ ಪೂರ್ವನಿಯೋಜಿತವಾಗಿದ್ದು, ಪೊಲೀಸರು ಸಹ ಪರೋಕ್ಷವಾಗಿ ಸಹಕರಿಸಿದ್ದಾರೆ. ನಾಲ್ಕೈದು ತಿಂಗಳಿಂದ ಅವರ ಚಲನವಲನಗಳ ಮೇಲೆ ಹಂತಕರು ನಿಗಾ ಇಟ್ಟಿದ್ದರು ಎಂಬ ಮಾಹಿತಿ ಇದೆ. ಹೀಗಿದ್ದರೂ ತಮಿಳುನಾಡಿನ ಗುಪ್ತಚರ ಇಲಾಖೆ ಹತ್ಯೆ ತಡೆಯುವಲ್ಲಿ ವಿಫಲವಾಗಿದೆ. ಆರ್ಮ್‌ಸ್ಟ್ರಾಂಗ್ ಅವರು ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು. ಹಾಗಾಗಿ, ಆಡಳಿತ ಪಕ್ಷದ ಕೈವಾಡವೂ ಇರುವ ಶಂಕೆ ಇದೆ. ಜನಾನುರಾಗಿ ನಾಯಕನ ಕೊಲೆಗೆ ನ್ಯಾಯ ಸಿಗಬೇಕಿದೆ. ಅದಕ್ಕಾಗಿ, ಪ್ರಕರಣದ ತನಿಖೆನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.