ADVERTISEMENT

Budget Expectations | ರಾಮನಗರ: ‘ನೀರಾ’ ಉದ್ಯಮಕ್ಕೆ ಸಿಗುವುದೇ ನೆರವು?

ಪರ್ಯಾಯ ಆದಾಯದತ್ತ ತೆಂಗು ಬೆಳೆಗಾರರ ಚಿತ್ತ; ಉದ್ಯಮಕ್ಕೆ ಸಹಾಯಧನ ನಿರೀಕ್ಷೆಯಲ್ಲಿ ರೈತರು 

ಓದೇಶ ಸಕಲೇಶಪುರ
Published 6 ಮಾರ್ಚ್ 2025, 5:38 IST
Last Updated 6 ಮಾರ್ಚ್ 2025, 5:38 IST
ತೆಂಗಿನ ಮರದಿಂದ ನೀರಾ ಇಳಿಸುತ್ತಿರುವ ರೈತ (ಸಾಂದರ್ಭಿಕ ಚಿತ್ರ)
ತೆಂಗಿನ ಮರದಿಂದ ನೀರಾ ಇಳಿಸುತ್ತಿರುವ ರೈತ (ಸಾಂದರ್ಭಿಕ ಚಿತ್ರ)   

ರಾಮನಗರ: ಮಾವು ಮತ್ತು ರೇಷ್ಮೆ ಬೆಳೆಗೆ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ತೆಂಗು ಸಹ ಪ್ರಮುಖ ತೋಟಗಾರಿಕೆ ಬೆಳೆಯಾಗಿ ಗುರುತಿಸಿಕೊಂಡಿದೆ. ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಮಾತ್ರವಷ್ಟೇ ಸೀಮಿತವಾಗಿದ್ದ ತೆಂಗಿನಮರಗಳಿಂದ ರೈತರು ಇದೀಗ ನೀರಾ ಇಳಿಸಲು ಉತ್ಸಾಹ ತೋರುತ್ತಿದ್ದಾರೆ. ಹಿಂದೊಮ್ಮೆ ನೀರಾ ಹೋರಾಟದ ಮೂಲಕ ಗಮನ ಸೆಳೆದಿದ್ದ ಜಿಲ್ಲೆಯ ನೀರಾ ಉದ್ಯಮಕ್ಕೆ ಬಜೆಟ್‌ನಲ್ಲಿ ನೆರವು ಸಿಗುವುದೇ ಎಂಬ ನಿರೀಕ್ಷೆ ರೈತರಲ್ಲಿ ಚಿಗುರೊಡೆದಿದೆ.

ತೆಂಗಿನಮರಗಳಿಂದ ನೀರಾ ಇಳಿಸಲು ಅನುಮತಿಗಾಗಿ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ರೈತ ಸಂಘ ಸೇರಿದಂತೆ ರೈತರ ನೇತೃತ್ವದ ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ರೈತ ಉತ್ಪಾದಕ ಸಂಸ್ಥೆಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇವೆ. ಚನ್ನಪಟ್ಟಣದಲ್ಲಿ ಈ ಪ್ರಯತ್ನಕ್ಕೆ ಹೆಚ್ಚು ಬಲ ಬಂದಿದೆ. ರೈತರ ಪ್ರಯತ್ನಕ್ಕೆ ಸ್ಥಳೀಯ ಶಾಸಕ ಸಿ.ಪಿ. ಯೋಗೇಶ್ವರ್ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಬಜೆಟ್‌ನಲ್ಲಿ ನೀರಾಗೆ ಅನುದಾನದ ಆಸರೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ರೈತರಿದ್ದಾರೆ.

ವೈಯಕ್ತಿಕ ಅನುಮತಿ ಇಲ್ಲ: ತೆಂಗು ಬೆಳೆಗಾರರು ವೈಯಕ್ತಿಕವಾಗಿ ಮರಗಳಿಂದ ನೀರಾ ಇಳಿಸಿ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಬದಲಿಗೆ, ರೈತರ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪಿಸಿದರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಸಿಗಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಐದು ಸಂಸ್ಥೆಗಳು ಸ್ಥಾಪನೆಯಾಗಿದ್ದು, ಪ್ರತಿ ಸಂಸ್ಥೆಯಲ್ಲೂ ಸಾವಿರಕ್ಕೂ ಹೆಚ್ಚು ರೈತರು ಸದಸ್ಯತ್ವ ಪಡೆದಿದ್ದಾರೆ.

ADVERTISEMENT

‘ತಮ್ಮ ತೋಟದಲ್ಲಿ ನೀರಾ ಇಳಿಸಲು ಆಸಕ್ತಿ ಇರುವ ರೈತರ ಗುಂಪುಗಳನ್ನು ಮಾಡಿ, ನೀರಾ ಇಳಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಗುಂಪಿನ ಪ್ರತಿ ಸದಸ್ಯ ತನ್ನ ತೋಟದ ಉತ್ತಮ ಇಳುವರಿ ಇರುವ 10 ತೆಂಗಿನ ಮರಗಳಲ್ಲಿ ನೀರಾ ಇಳಿಸಿ, ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ಮಾರಾಟ ಮಾಡಬಹುದಾಗಿದೆ’ ಎಂದು ಚನ್ನಪಟ್ಟಣದ ರೈತ ಮುಖಂಡ ಸಿ. ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್ಥಿಕತೆಯ ಮೂಲ: ‘ನೀರಾ ನೈಸರ್ಗಿಕ ಪಾನೀಯ. ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ಎನಿಸಿರುವ ಪೆಪ್ಸಿ, ಕೋಕೊಕೋಲಾ, ಸ್ಪ್ರೈಟ್ ಸೇರಿದಂತೆ ಇತರ ಪಾನಿಯಗಳಿಗಿಂತ ನೀರಾ ಆರೋಗ್ಯಕ್ಕೆ ಪೂರಕವಾಗಿದೆ. ತೆಂಗಿನಮರದ ಹೊಂಬಾಳೆಯಿಂದ ಬೆಳಿಗ್ಗೆ ಮತ್ತು ಸಂಜೆ ನಿತ್ಯ ಇಳಿಸಿ ಸಂಸ್ಕರಿಸುವ ನೀರಾವನ್ನು ಮಕ್ಕಳಿಂದಿಡಿದು ಎಲ್ಲಾ ವಯಸ್ಸಿನವರು ಕುಡಿಯಬಹುದು’ ಎಂದು ಸಿ. ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

‘ಪಕ್ಕದ ಕೇರಳದಲ್ಲಿ ನೀರಾ ಉದ್ಯಮ ಚನ್ನಾಗಿ ನಡೆಯುತ್ತಿದ್ದು, ಅಮೆರಿಕಕ್ಕೆ ನೀರಾ ಟೆಟ್ರಾ ಪ್ಯಾಕ್‌ಗಳನ್ನು ರಫ್ತು ಮಾಡುತ್ತಿದ್ದಾರೆ. ಶ್ರೀಲಂಕಾದಲ್ಲಿ ಸರ್ಕಾರದ ಆಸರೆಯಿಂದಾಗಿ ನೀರಾ ಉದ್ಯಮವು ಚನ್ನಾಗಿ ನಡೆಯುತ್ತಿದೆ. ಅಲ್ಲಿಯೂ ವಿದೇಶಗಳಿಗೆ ನೀರಾ ಉತ್ಪನ್ನಗಳು ರಫ್ತಾಗುತ್ತಿವೆ. ರಾಜ್ಯದ ಕೆಲ ಭಾಗಗಳಲ್ಲಿ ಎಫ್‌ಪಿಒಗಳು ನೀರಾ ಘಟಕ ಸ್ಥಾಪಿಸಿದ್ದರೂ, ಹೇಳಿಕೊಳ್ಳುವಷ್ಟು ಮಾರುಕಟ್ಟೆ ವಿಸ್ತರಣೆಯಾಗಿಲ್ಲ. ಸರ್ಕಾರ ಆಸಕ್ತಿ ತೋರಿಸಿ ಬಜೆಟ್‌ನಲ್ಲಿ ಅನುದಾನ ಕೊಟ್ಟರೆ ನೀರಾ ಉದ್ಯಮವು ರೈತರ ಕೈ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದರು.

ನೀರಾ ಉದ್ಯಮಕ್ಕೆ ಆಸಕ್ತಿ ತೋರಿರುವ ಚನ್ನಪಟ್ಟಣದ ರೈತರ ತಂಡ ನೀರಾ ಉದ್ಯಮ ಯಶಸ್ವಿಯಾಗಿ ನಡೆಯುತ್ತಿರುವ ಕೇರಳದ ಕಾಸರಗೋಡು, ತುಮಕೂರು ಜಿಲ್ಲೆಯ ಕುಣಿಗಲ್, ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಿಗೆ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದಿದೆ. ಕಳೆದ ತಿಂಗಳು ನೀರಾ ಉದ್ಯಮದ ಕುರಿತು ಸಂವಾದ ಕಾರ್ಯಕ್ರಮ ನಡೆಸಿ, ಉದ್ಯಮದ ಕುರಿತು ಬೆಳೆಗಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದೆ.

ಚನ್ನಪಟ್ಟಣದಲ್ಲಿ ಇತ್ತೀಚೆಗೆ ಜರುಗಿದ್ದ ಪ್ರೊ.ಎಂ.ಡಿ. ನಂಜುಡಸ್ವಾಮಿ ಅವರ ಜಯಂತಿ ಹಾಗೂ ನೀರಾ ಉದ್ಯಮ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಸೇರಿದಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರು ನೀರಾ ಸವಿದಿದ್ದರು
ಸಿ. ಪುಟ್ಟಸ್ವಾಮಿ ರೈತ ಮುಖಂಡ

‘ಘಟಕ ಸ್ಥಾಪಿಸಲು ಕನಿಷ್ಠ ₹2 ಕೋಟಿ ಬೇಕು’

‘ರೈತರ ನಿಯೋಗವು ಈಗಾಗಲೇ ಕೆಲ ನೀರಾ ಘಟಕಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಕೂಡ ನೋಡಿ ಬಂದಿದೆ. ಒಂದು ಘಟಕ ಸ್ಥಾಪಿಸಬೇಕಾದರೆ ಕನಿಷ್ಠ ₹2 ಕೋಟಿ ಬೇಕಾಗುತ್ತದೆ. ಮರದಿಂದ ನೀರಾ ಇಳಿಸುವುದು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹ ಸಂಸ್ಕರಣೆ ಟೆಟ್ರಾ ಪ್ಯಾಕ್‌ನಲ್ಲಿ ಪ್ಯಾಕಿಂಗ್ ಮಾರುಕಟ್ಟೆ ಜಾಲ ವಿಸ್ತರಣೆ ಅಗತ್ಯ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳು ಮಾನವ ಸಂಪನ್ಮೂಲ ಸೇರಿದಂತೆ ಘಟಕ ನಿರ್ವಹಣೆ ದೊಡ್ಡ ಸವಾಲಾಗಿದೆ. ಎಫ್‌ಪಿಒ ಮೂಲಕ ರೈತರೇ ಘಟಕ ಸ್ಥಾಪಿಸಲು ಮುಂದಾದರೆ ಅದಕ್ಕೆ ಸರ್ಕಾರ ಅದಕ್ಕೆ ಸಹಾಯಧನ ನೀಡಬೇಕು. ಮಾರುಕಟ್ಟೆ ವಿಸ್ತರಣೆ ಉತ್ಪನ್ನ ಸಾಗಿಸಲು ವಾಹನ ಸೇರಿದಂತೆ ಇತರ ಸೌಲಭ್ಯಗಳನ್ನು ಸರ್ಕಾರ ಒದಗಿಸಿದರೆ ನೀರಾ ಉದ್ಯಮವು ರೈತರಿಗೆ ಮತ್ತೊಂದು ಆದಾಯ ಮೂಲವಾಗಿ ಬದುಕಿಗೆ ಆಸರೆಯಾಗಲಿದೆ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಕಾರ್ಯರೂಪಕ್ಕೆ ಬಾರದ ಮಾರ್ಗಸೂಚಿ

ನೀರಾವನ್ನು ಪುಷ್ಟಿದಾಯಕ ಪಾನೀಯವಾಗಿ ಬಳಸಲು 2017-18ರಲ್ಲಿ ಅನುಮತಿ ನೀಡಿದ್ದ ರಾಜ್ಯ ಸರ್ಕಾರ ಇದಕ್ಕೆ ಪ್ರೋತ್ಸಾಹದಾಯಕವಾಗಿ ₹3 ಕೋಟಿ ಅನುದಾನ ಮೀಸಲಿಟ್ಟಿತ್ತು. ಪೂರಕವಾಗಿ ನೀರಾ ನೀತಿ ಜಾರಿಗೆ ತರುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು. ಅಬಕಾರಿ ನಿಯಮಗಳಲ್ಲಿ ಕೆಲ ಮಾರ್ಪಾಡು ಮಾಡುವುದಾಗಿಯೂ ಹೇಳಿತ್ತು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಾ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಆದರೆ ನೀರಾ ಘಟಕಗಳ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿಲ್ಲ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಘಟಕ ಸ್ಥಾಪನೆಗೆ 2017ರಲ್ಲಿ ತೋಟಗಾರಿಕೆ ಆಯುಕ್ತರು ಮಾರ್ಗಸೂಚಿ ಹೊರಡಿಸಿದ್ದರು. ತೆಂಗು ಅಭಿವೃದ್ಧಿ ಮಂಡಳಿಯಿಂದ ರಚನೆಯಾದ ನೋಂದಾಯಿತ ಬೆಳಗಾರರ ಕಂಪನಿಗಳು ಮತ್ತು ತೋಟಗಾರಿಕೆ ಇಲಾಖೆ ರಚಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ನೀರಾ ಇಳಿಸಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಬೇಕು. ಇದಕ್ಕಾಗಿ ಅಬಕಾರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಸೇರಿ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. ವಿವಿಧ ಹಂತದಲ್ಲಿ ಗರಿಷ್ಠ ₹25 ಲಕ್ಷದಿಂದ ₹50 ಲಕ್ಷದವರೆಗೆ ಸಹಾಯಧನ ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ₹10 ಲಕ್ಷದವರೆಗೆ ಸರ್ಕಾರ ಸಹಾಯಧನ ನೀಡುತ್ತದೆ. ಆದರೆ ಈ ಮಾರ್ಗಸೂಚಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.