ADVERTISEMENT

ರಾಮನಗರ | ರಸ್ತೆ ತಡೆಗೋಡೆಗೆ ಕಾರು ಡಿಕ್ಕಿ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 12:36 IST
Last Updated 13 ಜುಲೈ 2025, 12:36 IST
   

ರಾಮನಗರ: ತಾಲ್ಲೂಕಿನ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರ ಜಯಪುರ ಸೇತುವೆ ಬಳಿ ಭಾನುವಾರ ವೇಗವಾಗಿ ಬಂದ ಕಾರು ಹೆದ್ದಾರಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್​. ನಗರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯ ತಮ್ಮಣ್ಣ (54), ಅವರ ಪುತ್ರ ಮುತ್ತುರಾಜು (27) ಹಾಗೂ ಬೆಂಗಳೂರಿನ ಕಾರು ಚಾಲಕ ಶಶಾಂಕ್ (26) ಮೃತರು. ಮುತ್ತುರಾಜ ಅವರ ಬಾಮೈದ ಕೆ.ಆರ್. ಪೇಟೆ ತಾಲ್ಲೂಕಿನ ಸಂಜು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ್ ಮತ್ತು ಸಂಜು ಅವರು, ಬೆಳಿಗ್ಗೆ ಸ್ವಿಫ್ಟ್ ಡಿಸೈರ್ ಬಾಡಿಗೆ ಕಾರಿನಲ್ಲಿ ತಮ್ಮ ಗ್ರಾಮದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಕಾರು ಚಾಲನೆ ಮಾಡುತ್ತಿದ್ದ ಶಶಾಂಕ್ ಜಯಪುರ ಸೇತುವೆ ಬಳಿಯ ತಿರುವಿನಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಡಿಕ್ಕಿಯ ತೀವ್ರತೆಗೆ ಕಾರು ಹೆದ್ದಾರಿಯಲ್ಲಿ ಎರಡ್ಮೂರು ಸಲ ಪಲ್ಟಿಯಾಗಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡ ಸಂಜು ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಮೂವರ ಶವಗಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿಯಿತು. ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.