ಮಾಗಡಿ: ಸೆ.22ರಿಂದ 15ರವರೆಗೆ ನಡೆಯುವ ಜಾತಿ ಜನಗಣತಿಯಲ್ಲಿ ಕುಟುಂಬಸ್ಥರು ಒಕ್ಕಲಿಗ ಎಂದೇ ನಮೂದಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಹಾಗೂ ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್ ಸಮುದಾಯಕ್ಕೆ ಮನವಿ ಮಾಡಿದರು.
ಪಟ್ಟಣದ ಒಕ್ಕಲಿಗ ಸಂಘದ ಆಭರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಅಂದಾಜು ಪ್ರಕಾರ ಒಂದು ಕೋಟಿಗೊ ಹೆಚ್ಚು ಒಕ್ಕಲಿಗ ಸಮುದಾಯ ಇದೆ ಎಂದು ಅಂದಾಜಿಸಲಾಗಿದೆ. ಸಮುದಾಯದ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ, ಎಲ್ಲ ರೀತಿಯ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಸರ್ಕಾರ ಜನಗಣತಿ ನಡೆಸುತ್ತಿದೆ. ಸಮುದಾಯದಲ್ಲಿ 126 ಒಳಪಂಗಡಗಳಿವೆ. ಯಾವುದೇ ಒಳಪಂಗಡಕ್ಕೂ ಈ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡದೆ ಜನಗಣತಿ ಫಾರಂನ ಜಾತಿ-ಉಪಜಾತಿ ಎರಡು ವಿಭಾಗದಲ್ಲೂ ಒಕ್ಕಲಿಗ ಎಂದೇ ನಮೂದಿಸುವ ಮೂಲಕ ಒಗ್ಗಟ್ಟಿನ ಪ್ರದರ್ಶನ ತೋರುವ ಕೆಲಸ ಆಗಬೇಕು ಎಂದರು.
ವ್ಯವಸಾಯವೇ ಮೂಲಕ ಕಸುಬು: ಒಕ್ಕಲಿಗರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒಲವು ತೋರಿಸಿಲ್ಲ. ಒಕ್ಕಲತನವನ್ನೇ ಪ್ರಮುಖ ವೃತ್ತಿಯಾಗಿ ಅದರಲ್ಲೇ ಹೆಚ್ಚು ನಿರತರಾಗಿದ್ದೇವೆ. ಆಧುನಿಕ ಪದ್ಧತಿ ಬಳಸದೆ ಇರುವ ವ್ಯವಸ್ಥೆಯಲ್ಲೇ ವ್ಯವಸಾಯ ಮಾಡುತ್ತಿದ್ದು ಸಮುದಾಯದ ಮಕ್ಕಳಿಗೆ ಒಳ್ಳೆಯ ರೀತಿಯ ವಿದ್ಯಾಭ್ಯಾಸ, ಉನ್ನತ ನೌಕರಿ ಸಿಗಬೇಕಾದರೆ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ಮಂಜುನಾಥ್, ನರಸಿಂಹಮೂರ್ತಿ, ಈರಯ್ಯ ಜಯರಾಂ, ಲಕ್ಷ್ಮಣ್ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ವೆಂಕಟೇಶ್, ಚಕ್ರಬಾವಿ ರವೀಂದ್ರ, ಡಿ.ಸಿ.ಶಿವಣ್ಣ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಕಸ್ತೂರಿ ಕಿರಣ್, ರೂಪೇಶ್, ಕಾಂತರಾಜು, ತಗೀಕುಪ್ಪೆ ರಾಮು, ಮೂರ್ತಿ, ಸೀಗೇಕುಪ್ಪೆ ಶಿವಣ್ಣ, ಲೋಕೇಶ್, ಆಗ್ರೋ ಪುರುಷೋತ್ತಮ್ ಸೇರಿದಂತೆ ಒಕ್ಕಲಿಗ ಸಂಘದ ಮುಖಂಡರುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.