ADVERTISEMENT

ಕ್ಯಾಟ್‌ಫಿಶ್‌ ಸಾಕಣೆ ಹೊಂಡ, ಮೀನುಗಳ ನಾಶ

ಕಂಚುಗಾರನಹಳ್ಳಿ: ತಹಶೀಲ್ದಾರ್‌ ರಾಜು ನೇತೃತ್ವದಲ್ಲಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:43 IST
Last Updated 19 ಮೇ 2019, 10:43 IST
ಕ್ಯಾಟ್‌ಫಿಶ್‌ ಸಾಕಣೆ ಹೊಂಡಗಳನ್ನು ಶುಕ್ರವಾರ ನಾಶಪಡಿಸಲಾಯಿತು
ಕ್ಯಾಟ್‌ಫಿಶ್‌ ಸಾಕಣೆ ಹೊಂಡಗಳನ್ನು ಶುಕ್ರವಾರ ನಾಶಪಡಿಸಲಾಯಿತು   

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಸ್ಥಳದ ಮೇಲೆ ತಹಶೀಲ್ದಾರ್ ರಾಜು ನೇತೃತ್ವದ ತಂಡವು ಶುಕ್ರವಾರ ದಾಳಿ ನಡೆಸಿದ್ದು, ಹೊಂಡಗಳನ್ನು ನಾಶಪಡಿಸುವ ಪ್ರಕ್ರಿಯೆ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಇರುವ ಎಸ್‌ಪಿಆರ್ ತಿಮ್ಮೇಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬರೋಬ್ಬರಿ 38 ಹೊಂಡಗಳಲ್ಲಿ ಕ್ಯಾಟ್‌ಫಿಶ್ ಸಾಕಾಣಿಕೆ ನಡೆದಿತ್ತು. ಬೆಂಗಳೂರಿನ ರಜಾಕ್‌ಪಾಳ್ಯದ ನಜೀರ್ ಎಂಬುವವರು ಜಮೀನನ್ನು ಗುತ್ತಿಗೆ ಪಡೆದು ಈ ಹಲವು ವ್ಯಕ್ತಿಗಳ ಜೊತೆ ಸೇರಿ ಹೊಂಡಗಳನ್ನು ನಿರ್ಮಿಸಿ ಇವುಗಳನ್ನು ಸಾಕಣೆ ಮಾಡುತ್ತಿದ್ದರು. ಇದರಿಂದ ಸುತ್ತ ದುರ್ನಾತ ಹರಡಿದ್ದು, ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗಿತ್ತು.

ಸ್ಥಳೀಯರ ದೂರು ಆಧರಿಸಿ ದಾಳಿ ನಡೆಸಿದ ತಹಶೀಲ್ದಾರ್‌, ಕ್ಯಾಟ್‌ಫಿಶ್‌ ಅಡ್ಡೆಗಳನ್ನು ತೆರವುಗೊಳಿಸುವಂತೆ ಆದೇಶಿಸಿದರು. ಅಲ್ಲದೆ ಸಾಕಣೆ ಮಾಡಲಾದ ಕ್ಯಾಟ್‌ಫಿಶ್‌ ಅನ್ನು ನಾಶಗೊಳಿಸುವಂತೆ ಆದೇಶಿಸಿದರು. ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಹೊಂಡಗಳಿಂದ ನೀರನ್ನು ಹೊರಹಾಕಿ ಮೀನುಗಳನ್ನು ನಾಶ ಮಾಡುವ ಕಾರ್ಯಾಚರಣೆಯನ್ನು ಆರಂಭಿಸಿದರು.

ADVERTISEMENT

‘ಮೂರು ದಿನ ಕಾಲ ಕಾರ್ಯಾಚರಣೆ ನಡೆಸಿ ಇಲ್ಲಿನ ಹೊಂಡ ಹಾಗೂ ಈ ಮೀನುಗಳನ್ನು ಸಂಪೂರ್ಣ ನಾಶ ಮಾಡಲಾಗುವುದು. ಮೊದಲಿಗೆ ಹೊಂಡಗಳನ್ನು ಒಡೆದು ನೀರನ್ನು ಹೊರ ಚೆಲ್ಲಲಾಗುವುದು. ಬಳಿಕ ಅಲ್ಲಿನ ಮೀನುಗಳನ್ನು ಹೊರ ತೆಗೆದು ಮಣ್ಣಿನಲ್ಲಿ ಮುಚ್ಚಲಾಗುವುದು. ಹೊಂಡಗಳನ್ನು ಸಂಪೂರ್ಣ ನಾಶಪಡಿಸಲಾಗುವುದು’ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ಜಮೀನಿನ ಮಾಲೀಕರು ಹಾಗೂ ಸಾಕಣೆದಾರರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು, ಮೀನುಗಾರಿಕೆ ಅಧಿಕಾರಿಗಳ ಮೌನ
ಇಷ್ಟು ದೊಡ್ಡ ಮಟ್ಟದಲ್ಲಿ ಕ್ಯಾಟ್‌ಫಿಶ್‌ ಸಾಕಣೆ ಮಾಡುತ್ತಿದ್ದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಪೊಲೀಸರು ಮೌನ ವಹಿಸಿದ್ದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಹತ್ತಾರು ಎಕರೆಯಷ್ಟು ವಿಸ್ತೀರ್ಣವಾದ ಪ್ರದೇಶದಲ್ಲಿ ಈ ದಂದೆ ನಡೆದಿತ್ತು. ಹೊಲದ ಮುಂಭಾಗದಲ್ಲಿ ಬಾಳೆ ಮೊದಲಾದ ಬೆಳೆಗಳನ್ನು ಹಾಕಿ ಯಾರಿಗೂ ಗೊತ್ತಾಗದಂತೆ ಮಾಡಲಾಗಿತ್ತು. ಒಳಗೆ ಕೃಷಿ ಹೊಂಡ ಮಾದರಿಯಲ್ಲಿ ತೊಟ್ಟಿಗಳನ್ನು ಕಟ್ಟಿ ಕ್ಯಾಟ್‌ ಫಿಶ್‌ ಸಾಕಣೆ ಮಾಡಲಾಗುತ್ತಿತ್ತು. ಕಳೆದ ನಾಲ್ಕೈದು ವರ್ಷದಿಂದಲೂ ಇದು ಚಾಲ್ತಿಯಲ್ಲಿ ಇತ್ತು. ಇಲ್ಲಿನ ದಂದೆ ಕುರಿತು ಮೀನುಗಾರಿಕೆ ಅಧಿಕಾರಿಗಳಿಗೆ ಈ ಮುಂಚೆಯೇ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರಿದರು.

ಕ್ಯಾಟ್‌ ಫಿಶ್‌ ಸೇವನೆಯಿಂದ ಅನೇಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಅಲ್ಲದೆ ಇದು ಇರುವಲ್ಲಿ ಇತರ ಮೀನುಗಳ ಬೆಳವಣಿಗೆಯೂ ಇರುವುದಿಲ್ಲ. ಈ ಕಾರಣಕ್ಕೆ ಅನೇಕ ವರ್ಷಗಳ ಹಿಂದೆಯೇ ಸರ್ಕಾರವು ಇದರ ಸಾಕಣೆ ಮತ್ತು ಮಾರಾಟಕ್ಕೆ ನಿಷೇಧ ಹೇರಿದೆ.

*ಇಲ್ಲಿನ ಒಟ್ಟು 38 ಹೊಂಡಗಳನ್ನು, ಅದರಲ್ಲಿನ ಮೀನುಗಳನ್ನು ನಾಶಪಡಿಸಲಾಗುವುದು. ಜಮೀನು ಮಾಲೀಕರು, ಸಾಕಣೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು
ರಾಜು
ತಹಶೀಲ್ದಾರ್‌, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.