ADVERTISEMENT

ಚಾಮುಂಡೇಶ್ವರಿ ಕರಗೋತ್ಸವದಲ್ಲಿ ಮಿಂದೆದ್ದ ರೇಷ್ಮೆನಗರಿ

ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸಿದ ರಾಮನಗರ; ಶಕ್ತಿ ದೇವತೆಗಳಿಗೆ ನಮಿಸಿದ ಜನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 19:04 IST
Last Updated 15 ಜುಲೈ 2025, 19:04 IST
ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯುಕ್ತ ಬುಧವಾರ ನಡೆಯಲಿರುವ ಅಗ್ನಿ ಕೊಂಡೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದವು
ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯುಕ್ತ ಬುಧವಾರ ನಡೆಯಲಿರುವ ಅಗ್ನಿ ಕೊಂಡೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದವು   

ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಕರಗ ಸೇರಿದಂತೆ ಅಷ್ಟದೇವಿಯರ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಒಂದೇ ದಿನದಲ್ಲಿ ಚಾಮುಂಡೇಶ್ವರಿ ದೇವಿ ಸೇರಿದಂತೆ ವಿವಿಧ ಬಡವಾಣೆಗಳ 8 ಶಕ್ತಿ ದೇವತೆಗಳ ಕರಗ ಮಹೋತ್ಸವವು ಇಡೀ ನಗರವನ್ನು ಹಬ್ಬದಲ್ಲಿ ಮಿಂದೇಳುವಂತೆ ಮಾಡಿತು.

ಸಂಜೆಯಿಂದ ಬೆಳಿಗ್ಗೆವರೆಗೆ ನಡೆದ ಶಕ್ತಿ ದೇವತೆಗಳ ಕರಗದ ಮೆರವಣಿಗೆಯು ಭಕ್ತರಿಗೆ ಭಕ್ತಿಯನ್ನು ಉಣಬಡಿಸಿತು. ತಮ್ಮ ಬೀದಿಗೆ ಬಂದ ಕರಗಕ್ಕೆ ಭಕ್ತರು ಹೂವಿನ ಹಾದಿಯ ಸ್ವಾಗತ ನೀಡಿದರು. ಪೂಜೆ ಮಾಡಿ ಒಳಿತಿಗಾಗಿ ಪ್ರಾರ್ಥಿಸಿದರು. ಕರಗದ ಮೆರವಣಿಗೆಗೆ ತಮಟೆ ಮತ್ತು ಡೊಳ್ಳಿನ ಸದ್ದು ಮೆರಗು ತಂದಿತು. ಭಕ್ತಿ ಪರಶವಕ್ಕೆ ಒಳಗಾದ ಹಲವರು ಹೆಜ್ಜೆ ಹಾಕುತ್ತಾ ಕರಗದೊಂದಿಗೆ ಸಾಗಿದರು.

ಕರಗಕ್ಕೆ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ಕಳೆದೆರಡು ದಿನಗಳಿಂದ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ಕರಗದ ಹಿನ್ನೆಲೆಯಲ್ಲಿ ಇಡೀ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಎತ್ತ ನೋಡಿದರೂ ಝಗಮಗಿಸುವ ವಿದ್ಯುದ್ದೀಪಗಳ ಚಿತ್ತಾರ ಮತ್ತು ಅಲಂಕಾರ ಗಮನ ಸೆಳೆಯಿತು.

ADVERTISEMENT

ಚಾಮುಂಡೇಶ್ವರಿ ದೇವಸ್ಥಾನವನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಕಾಲಿಡಲಾಗಷ್ಟು ಭಕ್ತರ ದಂಡು ಸೇರಿತ್ತು. ದೇವರ ಮೂರ್ತಿಯ ದರ್ಶನ ಪಡೆದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ರಾತ್ರಿ ಸಿಂಗ್ರಾಭೋವಿದೊಡ್ಡಿಯ (ಚಾಮುಂಡಿಪುರ) ಅದಿಶಕ್ತಿ ದೇವಸ್ಥಾನದಿಂದ ಕರಗದ ಮೆರವಣಿಗೆ ಹೊರಟಿತು.

ಕರಗ ಹೊರಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ದೇವಾಲಯದ ಗರ್ಭಗುಡಿಯಿಂದ ಕರಗಧಾರಕ ದೇವಿ ಪ್ರಸಾದ್ ಅವರು ಹೊರಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರ ಕುಮಾರರು ‘ಗೋವಿಂದಾ... ಗೋವಿಂದಾ...’ ಎಂಬ ನಾಮಸ್ಮರಣೆಯೊಂದಿಗೆ ಕರಗದ ಜೊತೆ ಹೆಜ್ಜೆ ಹಾಕಿದರು.

ಪ್ರಮುಖ ಆದಿದೇವತೆಗೆ ಚಾಮುಂಡೇಶ್ವರಿ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಗಾಂಧೀನಗರ ಆದಿಶಕ್ತಿ, ಬಿಸಿಲು ಮಾರಮ್ಮ, ಮುತ್ತುಮಾರಮ್ಮ ಮಗ್ಗದ ಕೆರೆ ಮಾರಮ್ಮ, ಭಂಡಾರಮ್ಮ ದೇವಿಯ ಮಡಿ ನೀರಿನ ಕರಗ ನಡೆಯಿತು. ಎಲ್ಲಾ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ನವಶಕ್ತಿ ದೇವತೆಗಳ ಹೂವಿನ ಕರಗ ಅದ್ಧೂರಿಯಾಗಿ ನೆರವೇರಿತು.‌

ರಾತ್ರಿ ನಗರವನ್ನು ಪ್ರದಕ್ಷಿಣೆ ಹಾಕಿದ ಕರಗಗಳು ದೇವಾಲಯ ಹಾಗೂ ಭಕ್ತರಿಂದ ಪೂಜೆ ಸ್ವೀಕರಿಸಿದವು. ಬುಧವಾರ ಬೆಳಗ್ಗೆ ಆಯಾ ದೇವತೆಗಳ ಕರಗಗಳು ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಅಗ್ನಿಕೊಂಡ ಪ್ರವೇಶಿಸಲಿವೆ. ಆ ಮೂಲಕ ಕರಗ ಮಹೋತ್ಸವವಕ್ಕೆ ತೆರೆ ಬೀಳಲಿದೆ. ಕರಗ ಪ್ರಯುಕ್ತ ದೇವಾಲಯಗಳ ಸಮಿತಿಗಳು ಭಕ್ತರಿಗೆ ಊಟದ ವ್ಯವಸ್ಥೆ ಕೂಡ ಮಾಡಲಿವೆ.

ಚಾಮುಂಡೇಶ್ವರಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ರಾಮನಗರದ ಎಸ್‌ಪಿ ಕಚೇರಿ ವೃತ್ತದಲ್ಲಿ ಗಮನ ಸೆಳೆದ ದೇವಿಯ ವಿದ್ಯುದ್ದೀಪದ ಮೂರ್ತಿಯ ಚಿತ್ರ
ಗಮನ ಸೆಳೆದ ಹಿಂದೂ–ಮುಸ್ಲಿಂ–ಕ್ರೈಸ್ತ ಧರ್ಮಗಳ ಸೌಹಾರ್ದ ಸಾರುವ ವಿದ್ಯುತ್‌ ದೀಪಾಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.