ADVERTISEMENT

ರಾಮನಗರ | ಇಂದು ಚಾಮುಂಡೇಶ್ವರಿ ಕರಗ ಮಹೋತ್ಸವ

ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ ರಾಮನಗರ; ದೇವಾಲಯಕ್ಕೆ ವಿಶೇಷಾಲಂಕಾರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 2:29 IST
Last Updated 15 ಜುಲೈ 2025, 2:29 IST
ಕರಗ ಪ್ರಯುಕ್ತ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ವಿದ್ಯುತ್‌ ದೀಪಗಳಿಂದ ವಿಶೇಷಾಲಂಕಾರ ಮಾಡಲಾಗಿದೆ
ಕರಗ ಪ್ರಯುಕ್ತ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ವಿದ್ಯುತ್‌ ದೀಪಗಳಿಂದ ವಿಶೇಷಾಲಂಕಾರ ಮಾಡಲಾಗಿದೆ   

ರಾಮನಗರ: ನಗರದ ಶಕ್ತಿದೇವತೆಯ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮಹೋತ್ಸವ ಮಂಗಳವಾರ ಜರುಗಲಿದೆ. ಕರಗದ ಹಿನ್ನೆಲೆಯಲ್ಲಿ ಇಡೀ ನಗರದ ಪ್ರಮುಖ ರಸ್ತೆಗಳಿಂದಿಡಿದು ಬಹುತೇಕ ಬೀದಿಗಳು ವರ್ಣಮಯ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ದೇವಾಲಯವನ್ನು ಸಹ ವಿಶೇಷವಾಗಿ ಅಲಂಕರಿಸಲಾಗಿದೆ.

ಕರಗ ಪ್ರಯುಕ್ತ ಚಾಮುಂಡೇಶ್ವರಿ ದೇವಾಲಯದಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಆಚರಣೆಗಳು ಶುರುವಾಗಿವೆ. ಮಂಗಳವಾರ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುತ್ತದೆ. ಮಹಾಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಮಂಗಳವಾರ ಬೆಳಗ್ಗೆ ಮಡಿನೀರು ಕರಗ ನೆರವೇರಲಿದೆ.

ಸಂಜೆ ಕರಗಧಾರಕ ದೇವಿಪ್ರಸಾದ್ ಸಿಂಗ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ ಅಗ್ನಿಕೊಂಡಕ್ಕೆ ಜೋಡಿಸಿರುವ ಸೌದೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ರಾತ್ರಿ ದೇವಿಯ ಹೂವಿನ ಕರಗ ಹೊರಡಲಿದ್ದು, ನಗರದಾದ್ಯಂತ ಸಂಚರಿಸಲಿದೆ. ಹೋದೆಲ್ಲೆಲ್ಲಾ ಭಕ್ತರು ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ADVERTISEMENT

ರಾತ್ರಿಯಿಡೀ ನಗರವನ್ನು ಸುತ್ತಾಡುವ ಕರಗವು ಬುಧವಾರ ಬೆಳಿಗ್ಗೆ ದೇವಾಲಯದ ಎದುರು ನಿರ್ಮಿಸಿರುವ ಅಗ್ನಿಕೊಂಡವನ್ನು ಹಾಯುವ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕರಗ ಪ್ರಯುಕ್ತ ನಗರದ ಜನರು ಹಬ್ಬ ಆಚರಿಸಲಿದ್ದಾರೆ. ಮಾಂಸಾಹಾರ, ಸಸ್ಯಾಹಾರ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಸವಿಯಲಿದ್ದಾರೆ.

ಚಾಮುಂಡೇಶ್ವರಿ ಕರಗದ ಜೊತೆಗೆ ಶೆಟ್ಟಿಹಳ್ಳಿ ಆದಿಶಕ್ತಿ, ಮಗ್ಗದ ಕೇರಿ ಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಭಂಡಾರಮ್ಮ, ಕೊಂಕಾಣಿದೊಡ್ಡಿ ಆದಿಶಕ್ತಿ, ಐಜೂರು ಆದಿಶಕ್ತಿ, ತೋಪಖಾನ್ ಮೊಹಲ್ಲಾ ಮುತ್ತುಮಾರಮ್ಮ, ಹುಲಿಯೂರಮ್ಮ ಅಮ್ಮನವರ ಕರಗ ಮಹೋತ್ಸವ ಜರುಗಲಿದೆ.

ಕರಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೋಮವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12ವರೆಗೆ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಆಟಿಕೆಗಳು ಹಾಗೂ ಬಗೆ ಬಗೆಯ ಅಂಗಡಿಗಳು ಗಮನ ಸೆಳೆದವು.

ನಾವೆಲ್ಲರೂ ಒಂದು ಎಂಬ ಸೌಹಾರ್ದದ ಸಂದೇಶದೊಂದಿಗೆ ರಾಮನಗರದ ಚಾಮುಂಡೇಶ್ವರಿ ಅಮ್ಮನವರ ಕರಗವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ
ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

ಸಂಗೀತದ ರಸದೌತಣ ಕರಗ ಪ್ರಯುಕ್ತ ಇಂದುಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ಹಾಗೂ ಸಿನಿಮಾ ಕಲಾವಿದರು ಭಾಗವಹಿಸಲಿದ್ದಾರೆ. ಸಿನಿಮಾ ನಟರಾದ ರವಿಚಂದ್ರನ್ ಶ್ರೀಮುರುಳಿ ಯುವ ರಾಜಕುಮಾರ್ ನಟಿಯರಾದ ರಾಗಿಣಿ ಸಂಜನಾ ತನಿಷಾ ಕುಪ್ಪಂಡ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ರಘು ದೀಕ್ಷಿತ್ ಚಂದನ್ ಶೆಟ್ಟಿ ಸೇರಿದಂತೆ ಹಲವರು ಮೆರಗು ತುಂಬಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮಾಜಿ ಸಂಸದ ಡಿ.ಕೆ. ಸುರೇಶ್ ಶಾಸಕರಾದ ಎಚ್.ಸಿ. ಬಾಲಕೃಷ್ಣ ಸಿ.ಪಿ. ಯೋಗೇಶ್ವರ್ ಪರಿಷತ್ ಸದಸ್ಯರದ ಎಸ್.ರವಿ ಪುಟ್ಟಣ್ಣ ಸುಧಾಮ ದಾಸ್ ರಾಮೋಜಿ ಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಾಹನ ಸಂಚಾರದಲ್ಲಿ ಮಾರ್ಪಾಡು ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯಕ್ತ ರಾಮನಗರದಲ್ಲಿ ಸಾವಿರಾರು ಜನರು ಸೇರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಮಂಗಳವಾರ ಮಾರ್ಪಾಡು ಮಾಡಲಾಗಿದೆ. ಸಂಜೆ 4 ಗಂಟೆಯಿಂದ ಕರಗ ಮುಗಿಯುವವರಿಗೆ ಕೆಲ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಎಲ್ಲೆಲ್ಲಿ ಮಾರ್ಪಾಡು?: ರಾಮನಗರ ಟೌನ್‌ ಪಿಡಬ್ಲ್ಯೂಡಿ ಸರ್ಕಲ್‌ನಿಂದ‌ (ಪೊಲೀಸ್‌ ಭವನ) ವಾಟರ್‌ ಟ್ಯಾಂಕ್‌ ಸರ್ಕಲ್‌ ಆಲದ ಮರ ಸರ್ಕಲ್‌ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಚಾಮುಂಡೇಶ್ವರಿ ದೇವಸ್ಥಾನದಿಂದ ಅಗ್ರಹಾರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಿಂದ ಕಾಮನಗುಡಿ ಸರ್ಕಲ್‌ವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು: ವಿಜಯನಗರದ ಆಂಜನೇಯ ಸ್ವಾಮಿ ಆರ್ಚ್ ಬಳಿ ಇರುವ ಅರುಣೋದಯ ಲೇಔಟ್‌ನಲ್ಲಿ ಖಾಲಿ ಪ್ರದೇಶ ಜಿಲ್ಲಾ ಆಸ್ವತ್ರೆ ಹಾಗೂ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಪಾರ್ಕಿಂಗ್ ಸ್ಥಳ ಕಂದಾಯ ಭವನದಲ್ಲಿರುವ ಪಾರ್ಕಿಂಗ್ ಸ್ಥಳ ಬಾಲಕಿಯರ ಕಾಲೇಜು ಮೈದಾನ ಹಾಗೂ ಉರ್ದು ಶಾಲಾ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.