ADVERTISEMENT

ಜಾನಪದ ಕಲೆ, ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:16 IST
Last Updated 28 ಏಪ್ರಿಲ್ 2025, 16:16 IST
ಚನ್ನಪಟ್ಟಣದ ಸಾರ್ವಜನಿಕ ಪ್ರೌಢಶಾಲಾ ಆವರಣದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಕಲಾ ಸಂಘಟಕ ರಂಗೋತ್ರಿ ಕುಮಾರ್ ಉದ್ಘಾಟಿಸಿದರು. ಎಸ್.ಲಿಂಗೇಶ್ ಕುಮಾರ್ ಇತರರು ಹಾಜರಿದ್ದರು
ಚನ್ನಪಟ್ಟಣದ ಸಾರ್ವಜನಿಕ ಪ್ರೌಢಶಾಲಾ ಆವರಣದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಕಲಾ ಸಂಘಟಕ ರಂಗೋತ್ರಿ ಕುಮಾರ್ ಉದ್ಘಾಟಿಸಿದರು. ಎಸ್.ಲಿಂಗೇಶ್ ಕುಮಾರ್ ಇತರರು ಹಾಜರಿದ್ದರು   

ಚನ್ನಪಟ್ಟಣ: ನಗರದ ಸಾರ್ವಜನಿಕ ಪ್ರೌಢಶಾಲಾ ಆವರಣದಲ್ಲಿ ಬೆಳ್ಳಿ ಬೆಳದಿಂಗಳು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮ ನಡೆಯಿತು.

ಈ ವೇಳೆ ಕಲಾ ಸಂಘಟಕ ರಂಗೋತ್ರಿ ಕುಮಾರ್ ಮಾತನಾಡಿ, ಇಂದಿನ ಆಧುನಿಕತೆಯಿಂದ ನೆಲಮೂಲದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಲು ಕಲಾವಿದರು ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವಾದ್ಯಗಳ ಪರಿಕರಗಳು ಇಲ್ಲದ ಹೊತ್ತಿನಲ್ಲಿ ಹಾಡುತ್ತಿದ್ದ ಜನಪದ, ಗೀಗಿಪದ, ತತ್ವಪದ, ಸೇರಿದಂತೆ ಕಲೆಗಳು ಮೌಖಿಕ ಪರಂಪರೆಯಾಗಿ ಪಸರಿಸುತ್ತಿದ್ದವು. ಆದರೆ, ಇಂದು ಆಧುನಿಕತೆಯಿಂದ ನೆಲಮೂಲದ ಕಲೆ ಕಣ್ಮರೆಯಾಗುತ್ತಿವೆ. ಸಾಂಸ್ಕೃತಿಕ ರಾಯಬಾರಿಗಳಾದ ಜಾನಪದ ಕಲಾವಿದರು ನಾಡಿನ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದರು.

ADVERTISEMENT

ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ನಶಿಸುತ್ತಿರುವ ಮೂಲ ಸಂಸ್ಕೃತಿ, ಮೂಲ ಜನಪದ ಉಳಿಸಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಮೊದಲು ಪಾಶ್ಚಿಮಾತ್ಯ ಸಂಗೀತದಿಂದ ದೂರವಿಡಬೇಕು ಎಂದರು.

ಹಿರಿಯ ಶಿಕ್ಷಕ ಜಯರಾಮು ಮಾತನಾಡಿ, ಇಂದಿನ ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗಿಹೋಗಿದ್ದು, ನಮ್ಮ ಮೂಲ ಪರಂಪರೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಜನಪದ ಗೀತೆ, ಹೋರಾಟದ ಗೀತೆ, ತತ್ವ ಗಾಯನ, ವಚನ ಗೀತೆ, ಸೋಬಾನೆ ಪದಗಳು, ತಮಟೆ, ಪೂಜಾಕುಣಿತ, ಪಟದಕುಣಿತ, ಸೋಮನಕುಣಿತ, ಕೀಲುಕುದುರೆ, ಕಂಸಾಳೆ, ಮುಂತಾದ ಕಲಾಪ್ರದರ್ಶನ ನಡೆದವು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಕೆಂಪರಾಜು, ಉಪನ್ಯಾಸಕರಾದ ಶಶಿಕುಮಾರ್, ಎ.ಜಿ.ಜಯರಾಮು, ಸಾಮಾಜಿಕ ಹೋರಾಟಗಾರ ಪಿ.ಜಿ. ಗೋವಿಂದರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಕುಮಾರ್, ಕಲಾಸಂಘಟಕ ಎಸ್. ಜಯಸಿಂಹ, ರಂಗಭೂಮಿ ಕಲಾವಿದೆ ಪದ್ಮಾವತಿ ವೆಂಕಟಚಲಯ್ಯ, ಗಾಯಕ ಎಚ್.ಎಸ್.ಸರ್ವೋತ್ತಮ್, ಅಪ್ಪಗೆರೆ ಸತೀಶ್, ಉಪನ್ಯಾಸಕ ಬಿ.ಪಿ.ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.