
ಚನ್ನಪಟ್ಟಣ: ನಗರದ ಸಂಚಾರ ಪೊಲೀಸ್ ಠಾಣೆ, ನಗರ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಹಾಗೂ ಪುರ ಪೊಲೀಸ್ ಠಾಣೆ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಅಪರಾಧ ತಡೆ ಮಾಸಾಚರಣೆ ನಡೆಸಿ ಆಟೊ ಚಾಲಕರಿಗೆ ಸಂಚಾರ ನಿಯಮ ಪಾಲನೆ ಹಾಗೂ ಅಪರಾಧ ತಡೆಯುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಡಿವೈಎಸ್‌ಪಿ ಚನ್ನೇಗೌಡ ಮಾತನಾಡಿ, ಆಟೊ ಚಾಲಕರು ಸಂಚಾರ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲನೆ ಮಾಡಬೇಕು. ಪ್ರತಿಯೊಬ್ಬ ಚಾಲಕರು ತಮ್ಮ ಆಟೊಗಳಿಗೆ ಕ್ರಮಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕು. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ರವಿಕಿರಣ್ ಮಾತನಾಡಿ, ಆಟೊ ಚಾಲಕರು ಇಷ್ಟಬಂದ ರೀತಿಯಲ್ಲಿ ಎಲ್ಲೆಂದರಲ್ಲಿ ಆಟೊ ನಿಲುಗಡೆ ಮಾಡುವುದು, ಸಂಚಾರ ನಿಯಮ ಉಲ್ಲಂಘನೆ ಮಾಡುವುದು, ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುವುದು ಸೇರಿದಂತೆ ಯಾವುದೇ ತಪ್ಪು ಮಾಡಬಾರದು. ಪ್ರಯಾಣಿಕರು ತಮ್ಮ ಯಾವುದೇ ವಸ್ತುಗಳನ್ನು ಬಿಟ್ಟು ಹೋದರೆ ಪೊಲೀಸರಿಗೆ ತಿಳಿಸಬೇಕು ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಓಡಾಟ ನಡೆಸುವ ಆಟೊಗಳಿಗೆ ಕ್ರಮಸಂಖ್ಯೆ ನೀಡುವ ಕಾರ್ಯವನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಚಾಲಕರು ಯಾವುದೇ ತಪ್ಪು ಮಾಡಿದರೂ ಗುರುತಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಚಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಸವರಾಜು, ಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ಜಗದೀಶ್ ನಾಯ್ಕ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಉಷಾಮಾಲಿನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.