ADVERTISEMENT

ಚನ್ನಪಟ್ಟಣ: ಹಳಿ ಬಳಿ ಕಬ್ಬಿಣದ ತುಣುಕು ಬಿಟ್ಟಿದ್ದ ಸಿಬ್ಬಂದಿ

ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು । ಹಳಿ ಮಧ್ಯೆ ಕಬ್ಬಿಣದ ತುಣುಕು ಇಟ್ಟರೇ ಕಿಡಿಗೇಡಿಗಳು? । ತನಿಖೆ ಚುರುಕುಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:26 IST
Last Updated 24 ನವೆಂಬರ್ 2025, 2:26 IST
ಕಿಡಿಗೇಡಿಗಳು ರೈಲು ಹಳಿ ಮೇಲೆ‌ ಇಟ್ಟಿದ್ದ‌ ಕಬ್ಬಿಣದ ತುಣುಕು(ಸಂಗ್ರಹ)
ಕಿಡಿಗೇಡಿಗಳು ರೈಲು ಹಳಿ ಮೇಲೆ‌ ಇಟ್ಟಿದ್ದ‌ ಕಬ್ಬಿಣದ ತುಣುಕು(ಸಂಗ್ರಹ)   

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ವಂದಾರಗುಪ್ಪೆ ಬಳಿ ಶನಿವಾರ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ಕಬ್ಬಿಣದ ತುಣುಕಿನಿಂದಾಗಿ ಮೈಸೂರು– ಹುಬ್ಬಳ್ಳಿ ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ಗೆ ಹಾನಿಯಾಗಿ 2 ತಾಸು ಸಂಚಾರ ವಿಳಂಬವಾದ ಘಟನೆಗೆ ಸಂಬಂಧಿಸಿದಂತೆ, ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ದಿನ ಸ್ಥಳದಲ್ಲಿ ರೈಲ್ವೆ ಸಿಬ್ಬಂದಿ ಹಳಿ ನಿರ್ವಹಣೆ ಕಾಮಗಾರಿ ನಡೆಸುತ್ತಿದ್ದರು. ಅದರ ಭಾಗವಾಗಿ ತಿರುವಿನಲ್ಲಿ ಕಬ್ಬಿಣದ ಹಳಿಯ ತುಣುಕು ಅಳವಡಿಸುವ ಕೆಲಸವೂ ನಡೆದಿತ್ತು. ಕೆಲಸದ ಬಳಿಕ ಸಿಬ್ಬಂದಿ ಹಳಿ ಬಳಿ ಕಬ್ಬಿಣದ ತುಣಕು ಬಿಟ್ಟು ಹೋಗಿದ್ದಾರೆ. ಸಿಬ್ಬಂದಿ ಹಳಿ ಮಧ್ಯೆ ಆ ತುಣಕು ಬಿಟ್ಟಿದ್ದರೇ ಅಥವಾ ಹಳಿ ಪಕ್ಕ ಬಿಟ್ಟು ಹೋಗಿದ್ದ ತುಣುಕನ್ನ ಕಿಡಿಗೇಡಿಗಳು ಹಳಿ ಮಧ್ಯೆ ಹಾಕಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಳಿ ನಡುವೆ ಇದ್ದ ಸುಮಾರು ಒಂದು ಮೀಟರ್ ಉದ್ದದ ಕಬ್ಬಿಣದ ತುಣುಕು, ಅಂದಾಜು 50 ಕೆ.ಜಿ ಇದೆ. ರಾತ್ರಿ 8.20ರ ಸುಮಾರಿಗೆ ಈ ಮಾರ್ಗದಲ್ಲಿ ಹಂಪಿ ಎಕ್ಸ್‌ಪ್ರೆಸ್ ಹೋದಾಗ ಎಂಜಿನ್‌ನ ಆಯಿಲ್‌ ಟ್ಯಾಂಕ್‌ಗೆ ಬಡಿದಿದ್ದರಿಂದ ಆಯಿಲ್ ಸೋರಿಕೆಯಾಗಿತ್ತು. ಕೂಡಲೇ ಲೋಕೋಪೈಲಟ್ ರೈಲು ನಿಲ್ಲಿಸಿದ್ದರಿಂದ ಹೆಚ್ಚಿನ ಅವಘಡ ತಪ್ಪಿತ್ತು.

ADVERTISEMENT

ಘಟನೆಗೆ 20 ನಿಮಿಷ ಮುಂಚೆ ಟ್ಯುಟಿಕಾರ್ನ್ ರೈಲು ಸಹ ಅದೇ ಮಾರ್ಗದಲ್ಲಿ ಸರಾಗವಾಗಿ ಹೋಗಿದೆ. ಆಗ ಹಳಿ ಮಧ್ಯೆ ಇದ್ದ ಕಬ್ಬಿಣದ ತುಣುಕಿನಿದ ರೈಲಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಹಂಪಿ ಎಕ್ಸ್‌ಪ್ರೆಸ್ ಹೋದಾಗ ಎಂಜಿನ್‌ಗೆ ಹಾನಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ರೈಲ್ವೆ ಸಿಬ್ಬಂದಿ ಮರೆತು ಬಿಟ್ಟಿರುವ ಕಬ್ಬಿಣದ ತುಣುಕನ್ನು ಕಿಡಿಗೇಡಿಗಳು ಹಳಿ ಮಧ್ಯೆ ಇಟ್ಟಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಸಿಬ್ಬಂದಿ ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಜಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆ ಸಂದರ್ಭದಲ್ಲಿ ಮನುಷ್ಯರ ಚಲನವಲನಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.