
ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ವಂದಾರಗುಪ್ಪೆ ಬಳಿಯ ರೈಲು ಹಳಿ ಮೇಲೆ ಕಿಡಿಗೇಡಿಗಳು ಶನಿವಾರ ರಾತ್ರಿ ಕಬ್ಬಿಣದ ತುಣಕು ಇಟ್ಟಿದ್ದರಿಂದ, ಆ ಮಾರ್ಗದಲ್ಲಿ ಬಂದ ಹಂಪಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ಗೆ ಕಬ್ಬಿಣ ಬಡಿದಿದ್ದರಿಂದ ಟ್ಯಾಂಕ್ ಗೆ ಹಾನಿಯಾಗಿ ಆಯಿಲ್ ಸೋರಿಕೆಯಾಗಿದೆ.
ಘಟನೆಯಿಂದಾಗಿ ಮೈಸೂರು- ಹುಬ್ಬಳ್ಳಿ ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ಸಂಚಾರ ರಾತ್ರಿ 8.20ರಿಂದ ರಾತ್ರಿ 10.30ರವರೆಗೆ ಎರಡು ತಾಸು ವಿಳಂಬವಾಗಿದೆ.
ಮೈಸೂರಿನಿಂದ ಹುಬ್ಬಳಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರಾತ್ರಿ 8.20ರ ಸುಮಾರಿಗೆ ವಂದಾರಗುಪ್ಪೆ ಬಳಿ ಬಂದಾಗ ಘಟನೆ ನಡೆದಿದೆ. ಜೋರಾದ ಶಬ್ದ ಕೇಳಿದ ಲೋಕೋಪೈಲಟ್ ತಕ್ಷಣ ರೈಲು ನಿಲ್ಲಿಸಿ, ಸಮಯಪ್ರಜ್ಞೆ ಮೆರೆದಿದ್ದರಿಂದ ದೊಡ್ಡ ಅವಘಡವೊಂದು ತಪ್ಪಿಸಿದ್ದಾರೆ ಎಂದು ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರೈಲು ನಿಂತ ಬಳಿಕ ಲೋಕೋಪೈಲಟ್ ಎಂಜಿನ್ ಪರಿಶೀಲಿಸಿದಾಗ, ಆಯಿಲ್ ಟ್ಯಾಂಕ್ ಗೆ ಕಬ್ಬಿಣದ ತುಣುಕು ಬಡಿದಿದ್ದರಿಂದ ಆಯಿಲ್ ಸೋರುತ್ತಿರುವುದು ಕಂಡುಬಂತು. ತಕ್ಷಣ ಸಮೀಪದ ಚನ್ನಪಟ್ಟಣ ರೈಲು ನಿಲ್ದಾಣ, ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ದಳ ಹಾಗೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಆಯಿಲ್ ಸೋರಿಕೆಯನ್ನು ತಡೆಯಲು ಸಾಧ್ಯವಾಗದಿದ್ದರಿಂದ ಎಂಜಿನ್ ಬದಲಿಸಬೇಕಾಯಿತು. ಕೂಡಲೇ ಆ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಎರಡು ತಾಸು ತಡೆ ಹಿಡಿಯಲಾಯಿತು. ಹೆಜ್ಜಾಲ ರೈಲು ನಿಲ್ದಾಣದಿಂದ ಬೇರೆ ಎಂಜಿನ್ ತಂದು ಜೋಡಿಸಿದ ಬಳಿಕ ಹಂಪಿ ಎಕ್ಸ್‌ಪ್ರೆಸ್ ರೈಲು ಸಂಚಾರ ಮುಂದುವರೆಸಿತು ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ರೈಲ್ವೆ ಪೊಲೀಸರು, ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲು ಏಕಾಏಕಿ ನಿಂತಿದ್ದರಿಂದ ಪ್ರಯಾಣಿಕರು ಸಹ ಆತಂಕಕ್ಕೆ ಒಳಗಾಗಿದ್ದರು. ಕಿಡಿಗೇಡಿಗಳು ಹಳಿ ಮೇಲೆ ಇಟ್ಟಿದ್ದ ಕಬ್ಬಿಣದ ತುಣುಕನ್ನು ಪೊಲೀಸರು ಪತ್ತೆಹಚ್ಚಿ ತಮ್ಮ ವಶಕ್ಕೆ ಪಡೆದರು.
ಜುಲೈ ತಿಂಗಳಲ್ಲಿ ಇದೇ ವಂದಾರಗುಪ್ಪೆ ಬಳಿ, ಮೈಸೂರು-ಉದಯಪುರ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಲೋಕೋಪೈಲಟ್ ರೈಲು ನಿಲ್ಲಿಸಿ ದೊಡ್ಡ ಅವಘಡ ತಪ್ಪಿಸಿದ್ದರು. ಆಗಲೂ ರೈಲು ಸಂಚಾರ ಮೂರ್ನಾಲ್ಕು ತಾಸು ವಿಳಂಬವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.