ಚಿರತೆ
(ಪ್ರಾತಿನಿಧಿಕ ಚಿತ್ರ)
ಚನ್ನಪಟ್ಟಣ: ತಾಲ್ಲೂಕಿನ ಮುದುಗೆರೆಯಲ್ಲಿ ಚಿರತೆ ದಾಳಿ ನಡೆಸಿ 18 ಕುರಿಗಳನ್ನು ಕೊಂದು ಹಾಕಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಚಂದ್ರು ಅವರು ಸಾಕಿದ್ದ ಕುರಿಗಳ ಮೇಲೆ ದಾಳಿ ನಡೆಸಿ ಎಲ್ಲಾ ಕುರಿಗಳನ್ನು ಕೊಂದು, ಒಂದು ಕುರಿಯನ್ನು ಹೊತ್ತೊಯ್ದಿದೆ.
ಎಂದಿನಂತೆ ಶುಕ್ರವಾರ ರಾತ್ರಿ ಕುರಿ ಕೊಪ್ಪಲಿನಲ್ಲಿ ಕೂಡಿ ಹಾಕಿದ್ದರು. ಮಧ್ಯರಾತ್ರಿ ಚಿರತೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ₹1.50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದು ಮುದುಗೆರೆ ಗ್ರಾ.ಪಂ.ಅಧ್ಯಕ್ಷೆ ಮೀನಾಕುಮಾರಿ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಆಣಿಗೆರೆ ಅರಣ್ಯ ಪ್ರದೇಶ ಸೇರಿದಂತೆ ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಈ ಭಾಗದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಗಳ ಸೆರೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.