
ಚನ್ನಪಟ್ಟಣ/ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಪಟ್ಟಣ ಮತ್ತು ಮದ್ದೂರು ತಾಲ್ಲೂಕುಗಳ ಗಡಿಯಲ್ಲಿರುವ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು. ಮದ್ದೂರಿನ ಮಾರದೇವನಹಳ್ಳಿ, ಹೊಸೂರು ಅರಣ್ಯದಲ್ಲಿ ಹಾಗೂ ಚನ್ನಪಟ್ಟಣದ ಅಬ್ಬೂರು ಗುಡ್ಡ, ದೇವರಹೊಸಹಳ್ಳಿ, ಕಣ್ವ ಜಲಾಶಯದ ರಸ್ತೆಯ ಕಾಡಿನಲ್ಲಿ ಘಟನೆ ನಡೆದಿದೆ.
ಕುರುಚಲು ಅರಣ್ಯದಲ್ಲಿ ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯು, ನಂತರ ನಿಧಾನವಾಗಿ ಅರಣ್ಯದೊಳಗೆ ಹರಡುತ್ತಾ ಹೋಯಿತು. ಬೆಂಕಿಯ ತೀವ್ರತೆಗೆ ಅರಣ್ಯದೊಳಗಿನಿಂದ ಎದ್ದ ಹೊಗೆಯು ಆಗಸದೆತ್ತರಕ್ಕೆ ವ್ಯಾಪಿಸಿತು. ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಅರಣ್ಯದೊಳಗಿನಿಂದ ಗೋಚರಿಸುತ್ತಿದ್ದ ಹೊಗೆ ಕಂಡು ಆತಂಕ ವ್ಯಕ್ತಪಡಿಸಿದರು.
ಕಬ್ಬಿನ ಗದ್ದೆಯಲ್ಲಿ ಯಾರೊ ಬೆಂಕಿ ಹಚ್ಚಿರುವುದರಿಂದ ಈ ರೀತಿ ಹೊಗೆ ಬರುತ್ತಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಈ ಕುರಿತು ಪ್ರಯಾಣಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ, ‘ಪ್ರಜಾವಾಣಿ’ಯು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಖಚಿತವಾಯಿತು.
ಕೂಡಲೇ ಮದ್ದೂರು ಭಾಗದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಮದ್ದೂರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಚನ್ನಪಟ್ಟಣ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ರಾತ್ರಿ 10.30ರ ಹೊತ್ತಿಗೆ ಕಾರ್ಯಾಚರಣೆ ಮುಗಿದಿದೆ ಎಂದು ಚನ್ನಪಟ್ಟಣದ ಆರ್‌ಎಫ್‌ಒ ಮಲ್ಲೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.