ಚನ್ನಪಟ್ಟಣ: ಇಲ್ಲಿನ ಬಡಾಮಕಾನ್ ದರ್ಗಾದಲ್ಲಿ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ ಗಂಧ ಮಹೋತ್ಸವ ಕೊನೆ ದಿನವಾದ ಶುಕ್ರವಾರ ರಾತ್ರಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಆಯೋಜಕರು ಪಟ್ಟಣದ ಮೂವರು ಪೊಲೀಸರಿಗೆ ಸನ್ಮಾನಿಸಿ ಅವರ ಮೇಲೆ ನೋಟುಗಳನ್ನು ಎರಚಿದ್ದಾರೆ.
ಚನ್ನಪಟ್ಟಣ ಟೌನ್ ಠಾಣೆ ಪಿಎಸ್‌ಐ ಹರೀಶ್ ಸಿ.ಎಂ, ಎಎಸ್‌ಐ ಫೈರೋಜ್ ಹಾಗೂ ಪೂರ್ವ ಠಾಣೆಯ ದುರ್ಗಪ್ಪ ನೋಟಿನ ಸನ್ಮಾನ ಸ್ವೀಕರಿಸಿದವರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ಅವರು ಮೂವರಿಗೂ ಷೋಕಾಸ್ ನೋಟಿಸ್ ನೀಡಿದ್ದಾರೆ.
ನಾಲ್ಕು ದಿನಗಳ ಗಂಧ ಮಹೋತ್ಸವದ ಕಡೆ ದಿನದ ರಾತ್ರಿ ಕವ್ವಾಲಿ ಕಾರ್ಯಕ್ರಮವಿತ್ತು. ಅದು ಮುಗಿದ ಬಳಿಕ ಮಹೋತ್ಸವಕ್ಕೆ ಶ್ರಮಿಸಿದವರಿಗೆ ಆಯೋಜಕರು ವೇದಿಕೆಗೆ ಕರೆದು ಸನ್ಮಾನಿ
ಸುತ್ತಿದ್ದರು. ಅದರಂತೆ, ಮಹೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಿದ ಕಾರಣಕ್ಕೆ ಮೂವರೂ ಅಧಿಕಾರಿಗಳನ್ನು ವೇದಿಕೆಗೆ ಕರೆದರು. ಪೊಲೀಸ್ ಸಮವಸ್ತ್ರ ದಲ್ಲಿದ್ದ ಮೂವರಿಗೂ ದೊಡ್ಡ ಹೂವಿನ
ಹಾರ, ಟ್ರೋಫಿ ನೀಡಿ ಸನ್ಮಾನಿಸಿದರು. ಬಳಿಕ, ₹20ರ ನೋಟುಗಳನ್ನು ಮೂವರ ಮೇಲೂ ಎರಚಿದರು. ಪೊಲೀಸರ ಮೈ ಮೇಲೆ ಎರಚುತ್ತಿದ್ದ ನೋಟುಗಳು ಕೆಳಕ್ಕೆ ಬೀಳುತ್ತಿದ್ದಾಗ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದವರು ನಾ ಮುಂದು ತಾ ಮುಂದೆ ಎಂದು ಎತ್ತಿಕೊಂಡರು.
ಷೋಕಾಸ್ ನೋಟಿಸ್ ಜಾರಿ: ‘ಎಸ್‌ಪಿ ಗಂಧ ಮಹೋತ್ಸವ ಕಡೆ ದಿನ ಸನ್ಮಾನಿಸಿ ಹಣ ಎರಚಿರುವುದು ತಪ್ಪು. ಷೋಕಾಸ್ ನೋಟಿಸ್ ನೀಡಲಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.