
ಚನ್ನಪಟ್ಟಣ: ನಗರದ ಎಲೆಕೇರಿ ಬಳಿಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ಇದರೊಂದಿಗೆ ಈ ಭಾಗದ ಪ್ರಯಾಣಿಕರ ಬಹುದಿನಗಳ ಕನಸು ಈಡೇರುವ ದಿನ ಹತ್ತಿರವಾಗಿದೆ.
₹11 ಕೋಟಿ ಸಂಸದರ ಅನುದಾನದಲ್ಲಿ 2014ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ರೈಲ್ವೆ ಗೇಟ್ ಹಾಕಿದಾಗ ಹಳಿ ದಾಟಲು ತಾಸುಗಟ್ಟಲೇ ಕಾಯುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ ಆರಂಭವಾಗಿದ್ದ ಮೇಲ್ಸೇತುವೆ ಕಾಮಗಾರಿ 11ವರ್ಷಗಳಿಂದ ಕುಂಟುತ್ತಾ ಸಾಗಿತ್ತು.
ರೈಲ್ವೆ ಹಳಿಯ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಾಣವೂ ಆಗಿತ್ತು. ಆದರೆ ಆನಂತರ ಅನುದಾನದ ಕೊರತೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಕಾಮಗಾರಿ ಮುಂದುವರಿದಿರಲಿಲ್ಲ.
ನಗರದಿಂದ ಎಲೇಕೇರಿ ಮಾರ್ಗವಾಗಿ ರಾಂಪುರ, ದೇವರ ಹೊಸಹಳ್ಳಿ, ಕಣ್ವ ಜಲಾಶಯಗಳಿಗೆ ಸಂಪರ್ಕ ಕಲಿಸುವ ರಸ್ತೆ ಇದಾಗಿದ್ದ ಕಾರಣ ಇಲ್ಲಿ ರೈಲುಗಳು ಸಂಚರಿಸುವ ಸಂದರ್ಭದಲ್ಲೆಲ್ಲಾ ಗೇಟ್ ಹಾಕುವ ಕಾರಣ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಅದರಲ್ಲೂ ದೇವರ ಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ತಾಸುಗಟ್ಟಲೇ ಕಾಯುವಂತಾಗುತ್ತಿತ್ತು.
ಇದೆಲ್ಲವನ್ನು ಗಮನಿಸಿದ್ದ ಸ್ಥಳೀಯರು ಇಲ್ಲೊಂದು ಮೇಲ್ಸೇತುವೆ ನಿರ್ಮಾಣ ಮಾಡುವಂತೆ ನಗರಸಭೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ಸಂಸದರು, ಶಾಸಕರನ್ನು ಒತ್ತಾಯಿಸುತ್ತಲೇ ಬಂದಿದ್ದರು. ಇದೆಲ್ಲದರ ಪರಿಣಾಮವಾಗಿ 2014 ರಲ್ಲಿ ಅಂದಿನ ಸಂಸದ ಡಿ.ಕೆ. ಸುರೇಶ್ ಉಸ್ತುವಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗಿತ್ತು. ನಂತರ ಮುಂದಿನ ಕಾಮಗಾರಿಗೆ ಹಣದ ಕೊರತೆ ಎದುರಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ಈ ರಸ್ತೆಯಲ್ಲಿ ದೇವರ ಹೊಸಹಳ್ಳಿ ಗ್ರಾಮದ ಸಂಜೀವರಾಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಪ್ರತಿದಿನ ನೂರಾರು ಭಕ್ತರು ಬರುತ್ತಾರೆ. ಪ್ರಸಿದ್ಧ ಕಣ್ವ ಜಲಾಶಯ ವೀಕ್ಷಣೆಗೂ ಬಹುತೇಕ ಪ್ರವಾಸಿಗರು ಇದೇ ರಸ್ತೆ ಅವಲಂಬಿಸಿದ್ದಾರೆ. ಆದರೆ, ಈ ರಸ್ತೆಯಲ್ಲಿ ಬಹುತೇಕ ಬಾರಿ ರೈಲು ಗೇಟ್ ಮುಚ್ಚಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮೈಸೂರು–ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪ್ರತಿದಿನ 50ಕ್ಕೂ ಹೆಚ್ಚು ರೈಲುಗಳು ಓಡಾಡುವುದರಿಂದ ಗಂಟೆಗೊಮ್ಮೆ ರೈಲ್ವೆ ಗೇಟ್ ಮುಚ್ಚುವುದರಿಂದ ಬಹಳ ತೊಂದರೆಯಾಗುತ್ತಿತ್ತು.
ಜೊತೆಗೆ ನಗರದ ಶಾಲೆಗೆ ಬರುವ ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ಮಾರುಕಟ್ಟೆಗೆ ಹೋಗುವ ರೈತರು ರೈಲ್ವೆ ಗೇಟ್ ಮುಚ್ಚುವುದರಿಂದ ಪರಿತಪಿಸುವಂತಾಗಿತ್ತು. ಹಾಗೆಯೇ ಗಂಭೀರ ಸಂದರ್ಭದಲ್ಲಿ ಆಂಬುಲೆನ್ಸ್ ಸಹ ಕಾದು ನಿಲ್ಲುವಂತಾಗುತ್ತಿತ್ತು. ಈಗ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ.
ರೈಲ್ವೆ ಮೇಲ್ಸೇತುವೆ ಮುಂದಿನ ರಸ್ತೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ವಿಳಂಬವಾಗಿದ್ದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ರಸ್ತೆ ಜಾಗದಲ್ಲಿ ರೈತರ ಜಮೀನು, ನಿವೇಶನ ಇದ್ದವು. ಕೆಲವು ರೈತರು ಭೂಮಿ ನೀಡಲು ಒಪ್ಪಿರಲಿಲ್ಲ. ಇನ್ನು ಕೆಲವು ರೈತರು ಪರಿಹಾರ ಕಡಿಮೆ ಎಂದು ಹಿಂಜರಿಯುತ್ತಿದ್ದರು. ಕೆಲವು ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಸೇತುವೆ ಕಾಮಗಾರಿ ಮುಗಿದಿದ್ದರೂ ಮುಂದಿನ ರಸ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಸಿ.ಪಿ. ಯೋಗೇಶ್ವರ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು, ನಿವೇಶನದಾರರ ಮನವೊಲಿಸಿದ್ದರು. ಅನುದಾನ ಬಿಡುಗಡೆ ವಿಚಾರದಲ್ಲಿಯೂ ಮುತುವರ್ಜಿ ವಹಿಸಿ ಕಾಮಗಾರಿಯನ್ನು ಪುನರಾರಂಭಿಸಲು ಕಾರಣವಾಗಿದ್ದರು.
ಇದರ ಜೊತೆಗೆ ರೈಲ್ವೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸ್ಥಳೀಯ ಮುಖಂಡರ ಕಾಳಜಿಯಿಂದಾಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇದು ಇಲ್ಲಿನ ಪ್ರಯಾಣಿಕರು, ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಈ ಭಾಗದ ಪ್ರಯಾಣಿಕರ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪೂರ್ಣಪ್ರಮಾಣದ ಅನುದಾನದಲ್ಲಿ ರೈಲ್ವೆ ಮೇಲ್ಸೇತುವೆ ಮಾಡಲಾಗಿದೆ. ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು. ಜೊತೆಗೆ ಈಗಿರುವ ರೈಲ್ವೆ ಗೇಟ್ ಮುಚ್ಚುತ್ತೇವೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ ಜಾಗದಲ್ಲಿ ಪಾದಚಾರಿಗಳ ಓಡಾಟಕ್ಕೆ ಒಂದು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಾದಚಾರಿಗಳ ಅನುಕೂಲಕ್ಕಾಗಿ ಅಲ್ಲಿ ಒಂದು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುತ್ತೇವೆ.
ಡಾ.ಸಿ.ಎನ್. ಮಂಜುನಾಥ್, ಸಂಸದ, ಬೆಂಗಳೂರು ಗ್ರಾಮಾಂತರ
ರಸ್ತೆ ಅಗಲ ಮಾಡಲು ಕ್ರಮ ಕೈಗೊಳ್ಳಿ ಈ ಭಾಗದ ಪ್ರಯಾಣಿಕರ ಬಹುದಿನಗಳ ಆಸೆ ಕೈಗೂಡಿದೆ. ಇಲ್ಲಿ ಒಂದು ಉತ್ತಮವಾದ ಮೇಲ್ಸೇತುವೆ ನಿರ್ಮಾಣವಾಗಿದೆ. ಆದರೆ ಸೇತುವೆ ಮುಂದುವರೆದಂತೆ ರಸ್ತೆಯು ಬಹಳ ಕಿರಿದಾಗಿದೆ. ದೊಡ್ಡವಾಹನಗಳು ಬಂದಾಗ ಮತ್ತೊಂದು ವಾಹನ ಸಾಗಲು ಕಷ್ಟವಾಗುತ್ತದೆ. ಲೋಕೋಪಯೋಗಿ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಂಡು ರಸ್ತೆ ಅಗಲ ಮಾಡಬೇಕು.ರವೀಶ್ ಎಲೆಕೇರಿ, ಸ್ಥಳೀಯ
ರಾಂಪುರ, ದೇವರಹೊಸಹಳ್ಳಿ, ಕಣ್ವ ಭಾಗದಿಂದ ಓಡಾಡುವ ವಾಹನಗಳು, ವಾಹನ ಸವಾರರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಇಲ್ಲಿ ಬಹಳ ತೊಂದರೆಯಾಗುತ್ತಿತ್ತು. ಕೆಲವು ವೇಳೆ ಎರಡೆರಡು ರೈಲುಗಳು ಕ್ರಾಸ್ ಆಗುವವರೆಗೂ ಕಾಯುತ್ತಾ ನಿಲ್ಲಬೇಕಿತ್ತು. ಈಗ ಈ ತೊಂದರೆ ನಿವಾರಣೆಯಾಗಿದೆ. ಹಲವಾರು ವರ್ಷಗಳಿಂದ ಎದುರಿಸುತ್ತಿದ್ದ ಸಮಸ್ಯೆಗೆ ಕೇಂದ್ರ ಸರ್ಕಾರ ಅಂತಿಮವಾಗಿ ಮುಕ್ತಿ ನೀಡಿದೆ. ಮೇಲ್ಸೇತುವೆ ಶೀಘ್ರ ಉದ್ಘಾಟನೆ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ.
ಎ.ಸಿ. ಶ್ರುತಿ, ರಾಂಪುರ, ಚನ್ನಪಟ್ಟಣ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.