ಚನ್ನಪಟ್ಟಣ (ರಾಮನಗರ): ಪಟ್ಟಣದ ಸಾತನೂರು ರಸ್ತೆಯ ಕನಕನಗರದ ಮನೆಯೊಂದರಲ್ಲಿ ₹3 ಲಕ್ಷ ಮೌಲ್ಯದ ಚಿನ್ನದ ಸರ ಕದ್ದ ಕಳ್ಳನೊಬ್ಬ ಅದೇ ಮನೆಯ ಮಾಲೀಕರಿಗೆ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರಿಂದ ಧರ್ಮದೇಟು ತಿಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ.
ಕನಕಪುರ ತಾಲ್ಲೂಕಿನ ಮೇಳೆಕೋಟೆಯ ಹನುಮಂತ ಎಚ್. ಬಂಧಿತ ಆರೋಪಿ. ಆ.1ರಂದು ಬೆಳಗ್ಗೆ ಕನಕನಗರದ ಶಿವಮಾಲವಯ್ಯ ಅವರ ತಾಯಿ ಬೆಳಗ್ಗೆ 5 ಗಂಟೆ ಸುಮಾರಿಗೆ ಎದ್ದಾಗ ಕೊಠಡಿಯಲ್ಲಿದ್ದ ಬೀರುವಿನ ಬಾಗಿಲು ತೆರೆದಿತ್ತು. ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಒಳಗಿದ್ದ ₹3 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿತ್ತು.
ಕೂಡಲೇ ಕುಟುಂಬದವರು ಮನೆ ಹೊರಕ್ಕೆ ಬಂದು ರಸ್ತೆ ಹಾಗೂ ಅಕ್ಕಪಕ್ಕದ ಮನೆಯ ಬಳಿ ಕಳ್ಳನಿಗಾಗಿ ಹುಡುಕಾಡತೊಡಗಿದರು. ಸ್ಥಳೀಯರು ಜೊತೆಗೂಡಿಸಿದರು. ಆಗ ಹನುಮಂತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಆತನನ್ನು ಹಿಡಿದು ವಿಚಾರಿಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ನಂತರ ಸ್ಥಳೀಯರು ಆತನನ್ನು ಹಿಡಿದು ಥಳಿಸಿ, ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಜಿಮ್‌ನಲ್ಲಿ ₹1.49 ಲಕ್ಷ ಕಳ್ಳತನ
ರಾಮನಗರ: ನಗರದ ನ್ಯಾಯಾಲಯದ ಎದುರಿಗೆ ಇರುವ ಬಿಗ್‌ಮಾರ್ಟ್ ಮೇಲೆ ಇರುವ ಫಿಟ್ 24 ಎಂಬ ಜಿಮ್‌ಗೆ ಮಧ್ಯರಾತ್ರಿ ನುಗ್ಗಿದ ಮೂವರು ಕಳ್ಳರು ಲಾಕರ್‌ನಲ್ಲಿದ್ದ ₹1.49 ಲಕ್ಷ ನಗದು ಕದ್ದೊಯ್ದಿದ್ದಾರೆ. ಬಳಿಕ ಅಕ್ಕಪಕ್ಕದ ಅಂಗಡಿಗಳಲ್ಲೂ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಜುಲೈ 31ರಂದು ರಾತ್ರಿ 10ರ ಸುಮಾರಿಗೆ ಜಿಮ್ ಮಾಲೀಕ ವಿವೇಕಾನಂದ ನಗರದ ಸಂತೋಷ್ ಕೆ. ಜಿಮ್ ಬಾಗಿಲು ಮುಚ್ಚಿಕೊಂಡು ಹೋಗಿದ್ದರು. ಬೆಳಗ್ಗೆ 5 ಗಂಟೆಗೆ ಬಂದು ಜಿಮ್ ಬಾಗಿಲು ತೆಗೆಯಲು ಮುಂದಾದಾಗ ಬೀಗ ಒಡೆದು ಹಾಕಿರುವುದು ಗೊತ್ತಾಯಿತು. ಒಳಗೆ ಹೋಗಿ ನೋಡಿದಾಗ ಲಾಕರ್‌ನಲ್ಲಿ ನಗದು ಕಳುವಾಗಿತ್ತು.
ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ರಾತ್ರಿ 1.45ರ ಸುಮಾರಿಗೆ ಮೂವರು ಕಳ್ಳರು ಜಿಮ್ ಒಳಕ್ಕೆ ನುಗ್ಗಿ ಕಳ್ಳತನ ಮಾಡಿರುವುದು ಗೊತ್ತಾಯಿತು. ಕಳ್ಳರು ಜಿಮ್ ಪಕ್ಕದಲ್ಲಿರುವ ಕ್ರಿಸ್ಟನ್ ಚೈಲ್ಡ್ ಕೇರ್ ಆಸ್ಪತ್ರೆ ಮತ್ತು ಪಕ್ಕದ ಕಟ್ಟಡದಲ್ಲಿರುವ ಬಾಟಾ ಷೋರೂಂನಲ್ಲೂ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ. ಸಂತೋಷ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಡಿಕ್ಕಿ: ಪಾದಚಾರಿ ಸಾವು
ಬಿಡದಿ (ರಾಮನಗರ): ಹೋಬಳಿಯ ಹೆಜ್ಜಾಲದಲ್ಲಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದಿದ್ದರಿಂದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮಾಇದ್ಲಾಯಿ ಗ್ರಾಮದ ಸಾಗರ್ (23) ಮೃತ ಯುವಕ.
ಹೆಜ್ಜಾಲದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್, ಜುಲೈ 31ರಂದು ರಾತ್ರಿ 10.15ರ ಸುಮಾರಿಗೆ ಸಮೀಪದ ಹೆದ್ದಾರಿ ಪಕ್ಕದ ಬೇಕರಿಯಲ್ಲಿ ಟೀ ಕುಡಿದು ಹೆದ್ದಾರಿಯಲ್ಲಿ ನಡೆದುಕೊಂಡು ಮನೆ ಕಡೆಗೆ ಬರುತ್ತಿದ್ದರು. ಈ ವೇಳೆ, ಹಿಂದಿನಿಂದ ವೇಗವಾಗಿ ಬಂದ ಬೆಂಗಳೂರು ಕಡೆಗೆ ಹೊರಟಿದ್ದ ಫಾರ್ಚ್ಯೂನರ್ ಕಾರು ಸಾಗರ್ ಅವರಿಗೆ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಸಾಗರ್ ಸ್ಥಳದಲ್ಲೇ ಮೃತಪಟ್ಟರು. ಚಾಲಕ ಅಪಘಾತದ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.