ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ‘ಮೈತ್ರಿ’ಯಲ್ಲಿ ಅಪಸ್ವರ: ‘ಫ್ರೆಂಡ್ಲಿ ಫೈಟ್‌’ ಸವಾಲು

ಚನ್ನಪಟ್ಟಣ ಉಪ ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ, ಜೆಡಿಎಸ್‌ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 19:50 IST
Last Updated 18 ಜುಲೈ 2024, 19:50 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಅಖಾಡಕ್ಕೆ ಯಾರು ಇಳಿಯಬೇಕು ಎನ್ನುವ ಕುರಿತು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದಲ್ಲಿ ಅದಾಗಲೇ ಭಿನ್ನ ರಾಗ ಶುರುವಾಗಿದೆ.

ಇಲ್ಲಿಯವರೆಗೂ ಎರಡೂ ಪಕ್ಷಗಳ ಒಳಗೆ ನಡೆಯುತ್ತಿದ್ದ ರಾಜಕೀಯ ಮೇಲಾಟ ಇದೀಗ ಬೀದಿಗೆ ಬಂದಿದೆ. ಎರಡೂ ಪಕ್ಷಗಳ ರಾಜ್ಯ ನಾಯಕರು ಈ ಬಗ್ಗೆ ಮೌನ ವಹಿಸಿದ್ದು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಬಹಿರಂಗವಾಗಿ ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. 

ಲೋಕಸಭಾ ಚುನವಾಣೆಯಲ್ಲಿ ಭಾರಿ ಒಗ್ಗಟ್ಟು ಪ್ರದರ್ಶಿಸಿದ್ದ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಚನ್ನಪಟ್ಟಣ ಉಪ ಚುನಾವಣೆ ಘೋಷಣೆಗೂ ಮೊದಲೇ ‘ಮೈತ್ರಿ ಬದಿಗಿಟ್ಟು ಫ್ರೆಂಡ್ಲಿ ಫೈಟ್‌ ಮಾಡೋಣ’ ಎಂದು ಪರಸ್ಪರ ತೊಡೆ ತಟ್ಟುತ್ತಿದ್ದಾರೆ.

ADVERTISEMENT

ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಜೆಡಿಎಸ್‌ ಮುನ್ನೆಲೆಗೆ ತಂದಿದೆ. ‘ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್‌ ಒಬ್ಬರೇ ಚುನಾವಣೆ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿ’ ಎಂದು ಅವರ ಬೆಂಬಲಿಗರು ವಾದ ಮಂಡಿಸುತ್ತಿದ್ದಾರೆ. ‘ಯೋಗೇಶ್ವರ್‌ ಅವರ ವಿಧಾನ ಪರಿಷತ್‌ ಸದಸ್ಯತ್ವ ಅವಧಿ ಇನ್ನೂ ಒಂದೂವರೆ ವರ್ಷ ಬಾಕಿ ಇದೆ’ ಎಂಬ ವಾದವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಅಡ್ಡಗಾಲು ಹಾಕುತ್ತಿದೆ.

ಅಭ್ಯರ್ಥಿ ಅಂತಿಮವಾಗುವ ಮೊದಲೇ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡತೊಡಗಿದ್ದಾರೆ. ಚನ್ನಪಟ್ಟಣದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಎದುರಾದಾಗ ಗೆಳೆತನ ಮರೆತು ಹಗೆತನದ ಮಾತು ಕೇಳಿ ಬರುತ್ತಿವೆ. 

ಮತ್ತೊಂದೆಡೆ ‘ಚನ್ನಪಟ್ಟಣದಿಂದ ಹೊಸ ರಾಜಕೀಯ ಅಧ್ಯಾಯ ಶುರು’ ಎಂದು ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ಸಾರ್ವಜನಿಕರ ಸಮಸ್ಯೆ ಆಲಿಸಲು ಮೂರು ದಿನ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಮೇಲಿಂದ ಮೇಲೆ ಚನ್ನಪಟ್ಟಣಕ್ಕೆ ಭೇಟಿ ಕೊಡುತ್ತಿದ್ದಾರೆ. ಅದಾಗಲೇ ಚುನಾವಣಾ ವಾತಾವರಣ ಸೃಷ್ಟಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅಬ್ಬರದ ಬೆನ್ನಲೇ ಮೈತ್ರಿಕೂಟದಲ್ಲೂ ಅಭ್ಯರ್ಥಿ ಚರ್ಚೆ ಬಿರುಸುಗೊಂಡಿದೆ. ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಪತ್ನಿ ಅನಸೂಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಹೆಸರು ಕೇಳಿ ಬರುತ್ತಿವೆ.

ಜೆಡಿಎಸ್‌ನಿಂದ ಮೂರು ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ದೆಹಲಿಗೆ ತೆರಳಿದ ಯೋಗೇಶ್ವರ್‌ ಬಿಜೆಪಿ ಮುಖಂಡರು ಮತ್ತು ಕುಮಾರಸ್ವಾಮಿ ಅವರನ್ನು ಕಂಡು ಚರ್ಚಿಸಿ ಬಂದಿದ್ದಾರೆ. ಅಲ್ಲಿಂದ ಮರಳಿದ ಬಳಿಕ ಮಾಧ್ಯಮದವರ ಮುಂದೆ ಬಂದ ಯೋಗೇಶ್ವರ್, ‘ನಾನೇ ಕ್ಷೇತ್ರದ ಅಭ್ಯರ್ಥಿ. ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದು, ಚುನಾವಣೆಗೆ ಸಿದ್ಧರಾಗುವಂತೆ  ಸೂಚಿಸಿದ್ದಾರೆ. ಎರಡ್ಮೂರು ದಿನದಲ್ಲಿ ಅವರೇ ಅಧಿಕೃತವಾಗಿ ಹೆಸರು ಘೋಷಿಸಲಿದ್ದಾರೆ’ ಎಂದು ಹೇಳಿಬಿಟ್ಟರು.

ಆದರೆ, ಎಲ್ಲಿಯೂ ಅಪ್ಪಿತಪ್ಪಿಯೂ ಯೋಗೇಶ್ವರ್ ಹೆಸರು ಹೇಳದ ಕುಮಾರಸ್ವಾಮಿ, ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸುವೆ ಎಂದು ಉಲ್ಟಾ ಹೊಡೆದಿದ್ದಾರೆ. ಅದಕ್ಕೆ ಕೆರಳಿದ ಸಿಪಿವೈಗೆ ಬೆಂಬಲಿಗರು, ‘ಮೈತ್ರಿ ಬದಿಗಿಟ್ಟು ಫ್ರೆಂಡ್ಲಿ ಫೈಟ್‌ ಮಾಡೋಣ’ ಎಂದು ಸವಾಲು ಹಾಕಿದ್ದಾರೆ.

ಎಚ್‌ಡಿಕೆ ಮತ್ತು ಸಿಪಿವೈ ತಮ್ಮ ಬೆಂಬಲಿಗರನ್ನು ಮುಂದೆ ಬಿಟ್ಟು ದಾಳ ಉರುಳಿಸುತ್ತಿದ್ದಾರೆ. ಇನ್ನೂ ಅಸಲಿ ಆಟ ಶುರುವಾಗಿಲ್ಲ. ಒಮ್ಮೆ ಚನ್ನಪಟ್ಟಣ ತಮ್ಮ ಕೈ ತಪ್ಪಿ ಹೋದರೆ ಮರಳಿ ಕೈವಶವಾಗುವುದು ಕಷ್ಟ ಎಂಬ ಸ್ಪಷ್ಟ ಅರಿವು ಕುಮಾರಸ್ವಾಮಿ ಅವರಿಗಿದೆ. ಬಿಜೆಪಿ ಬೆಂಬಲ ಇಲ್ಲದೆಯೂ ಗೆಲ್ಲಬಲ್ಲ ಸಾಮರ್ಥ್ಯ ಮತ್ತು ನಿರ್ದಿಷ್ಟ ಮತ ಬ್ಯಾಂಕ್‌ ಜೆಡಿಎಸ್‌ಗಿದೆ. ಬಿಜೆಪಿ ಶಕ್ತಿಗಿಂತ ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು ಇಲ್ಲಿ ಕೆಲಸ ಮಾಡುತ್ತದೆ. ಮೇಲಾಗಿ ಅವರು ಸ್ಥಳೀಯ ಅಭ್ಯರ್ಥಿ ಮತ್ತು ರಾಜಕೀಯವಾಗಿ ಭಾರಿ ಚಾಣಾಕ್ಷ. 

ಇಬ್ಬರೂ ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಿದರೆ ಉಪ ಚುನಾವಣಾ ಕಣ ರಂಗೇರುವುದರಲ್ಲಿ ಸಂದೇಹವಿಲ್ಲ. ಮೈತ್ರಿ ಬಿರುಕು ದೊಡ್ಡದಾದರೆ ಕನಕಪುರದ ಸಹೋದರರು ಲಾಭ ಪಡೆಯದೆ ಇರಲಾರರು! 

ಸಿ.ಪಿ. ಯೋಗೇಶ್ವರ್
ನಿಖಿಲ್ ಕುಮಾರಸ್ವಾಮಿ

‘ಫ್ರೆಂಡ್ಲಿ ಫೈಟ್’ ಸಂದೇಶದ ಹಿಂದೆ ಸಿಪಿವೈ ?

ಉಪ ಚುನಾವಣೆಯಲ್ಲಿ ಯೋಗೇಶ್ವರ್‌ ‘ಗೇಮ್ ಚೇಂಜರ್’ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಷ್ಟೇ ಅಲ್ಲ ಈ ಚುನಾವಣೆ ಅವರ ರಾಜಕೀಯ ಅಳಿವು ಉಳಿವಿನ ಪ್ರಶ್ನೆಯೂ ಹೌದು. ಹಾಗಾಗಿ ಮೈತ್ರಿಕೂಟದ ವರಿಷ್ಠರು ತಮ್ಮ ಹೆಸರು ಘೋಷಿಸುವ ಮುಂಚೆಯೇ ‘ನಾನೇ ಅಭ್ಯರ್ಥಿ’ ಎಂದು ಘೋಷಿಸಿಕೊಂಡಿದ್ದಾರೆ.ಇದೀಗ ಅವರ ಬೆಂಬಲಿಗರು ‘ಫ್ರೆಂಡ್ಲಿ ಫೈಟ್’ ಎನ್ನುವ ಮೂಲಕ ಪ್ರತ್ಯೇಕ ಸ್ಪರ್ಧೆಯ ಸಂದೇಶ ನೀಡಿದ್ದಾರೆ. ಈ ಬೆಳವಣಿಗೆ ಹಿಂದೆ ಸಿಪಿವೈ ಪಾತ್ರವಿರುವುದನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತವೆ ಮೂಲಗಳು. ಒಂದು ವೇಳೆ ಟಿಕೆಟ್‌ ಕೈ ತಪ್ಪಿಸಿದರೆ ಯೋಗೇಶ್ವರ್‌ ಸುಮ್ಮನೇ ಕುಳಿತುಕೊಳ್ಳುವ ವ್ಯಕ್ತಿಯಂತೂ ಅಲ್ಲ. ‘ಫ್ರೆಂಡ್ಲಿ ಫೈಟ್’ ಏರ್ಪಟ್ಟರೆ ಅಂತಿಮವಾಗಿ ಅದರ ಯಾರಿಗೆ ಲಾಭ ಎನ್ನುವುದೇ ಪ್ರಶ್ನೆ.   

ಏಕೈಕ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ 

ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ತಮ್ಮ ಕುಟುಂಬದ ಹಿಡಿತ ಕೈ ತಪ್ಪಲಿದೆ ಎಂಬ ಆತಂಕ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಪುತ್ರ ನಿಖಿಲ್ ಅವರಿಗೆ ರಾಜಕೀಯ ನೆಲೆ ಕಲ್ಪಿಸುವ ಚಿಂತೆಯೂ ಕಾಡುತ್ತಿದೆ. ಹಾಗಾಗಿ ನಿಖಿಲ್‌ ಅಥವಾ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಿ ಚನ್ನಪಟ್ಟಣದ ಮೇಲೆ ಹಿಡಿತ ಉಳಿಸಿಕೊಳ್ಳುವ ಆಲೋಚನೆ ಅವರದ್ದು. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಕನಕಪುರ ಕಾಂಗ್ರೆಸ್ ಹಿಡಿತದಲ್ಲಿದ್ದರೆ ಉಳಿದ ಮೂರು ಕ್ಷೇತ್ರ ಜೆಡಿಎಸ್‌ ವಶದಲ್ಲಿ ಇರುತ್ತಿದ್ದವು. 2023ರ ಚುನಾವಣೆಯಲ್ಲಿ ಅದು ತಲೆ ಕೆಳಗಾಗಿದೆ. ಜೆಡಿಎಸ್‌ ತೆಕ್ಕೆಯಲ್ಲಿರುವ ಜಿಲ್ಲೆಯ ಏಕೈಕ ಕ್ಷೇತ್ರವಾಗಿರುವ ಚನ್ನಪಟ್ಟಣವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿದೆ ಎನ್ನುತ್ತವೆ ಜೆಡಿಎಸ್ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.