ADVERTISEMENT

ಚನ್ನಪಟ್ಟಣ- ₹50 ಕೋಟಿ ಅನುದಾನ: ಜಿದ್ದಾಜಿದ್ದಿನ ಕಣ

ಇಂದು ಸಚಿವರಿಂದ ಚಾಲನೆ; ತಮ್ಮದೆಂದು ಬಿಂಬಿಸಿಕೊಳ್ಳಲು ಬಿಜೆಪಿ–ಜೆಡಿಎಸ್‌ ಪೈಪೋಟಿ

ಎಚ್.ಎಂ.ರಮೇಶ್
Published 1 ಅಕ್ಟೋಬರ್ 2022, 4:30 IST
Last Updated 1 ಅಕ್ಟೋಬರ್ 2022, 4:30 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಚನ್ನಪಟ್ಟಣ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವಿಶೇಷ ಅನುದಾನದಲ್ಲಿ ₹50 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನ ತಂದವರು ನಾವು ಎಂದು ಜೆಡಿಎಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿರುವುದು ತಾಲ್ಲೂಕಿನಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಈ ವಿಶೇಷ ಅನುದಾನದಲ್ಲಿ ಶನಿವಾರ (ಅ.1) ತರಾತುರಿಯಲ್ಲಿ ಕಾಮಗಾರಿಗಳ ಆರಂಭಕ್ಕೆ ಭೂಮಿಪೂಜೆ ಏರ್ಪಡಿಸಿದ್ದು, ತಾಲ್ಲೂಕಿನ ರಾಂಪುರ, ಪಟ್ಲು, ಬೈರಾಪಟ್ಟಣ, ಅಕ್ಕೂರು ಹೊಸಹಳ್ಳಿ, ಕೋಡಂಬಹಳ್ಳಿ ಗ್ರಾಮಗಳಲ್ಲಿ ಕಾರ್ಯಕ್ರಮ ನಿಗದಿಯಾಗಿದೆ.ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಈ ಕಾರ್ಯಕ್ರಮಗಳ ಆಯೋಜನೆಯ ಉಸ್ತುವಾರಿ ವಹಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕೆ.ಆರ್.ಐ.ಡಿ.ಎಲ್. ಇಲಾಖೆಯಿಂದ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿ ಹಂಚಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಭೂಮಿಪೂಜೆ ನೆರವೇರಿಸುವರು. ಹಾಗೆಯೇ ಶಾಸಕ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿದೆ.

ADVERTISEMENT

ಆದರೆ ಇದಕ್ಕೆ ಜೆಡಿಎಸ್ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯ ಶಾಸಕರು ಭೂಮಿಪೂಜೆ ಮಾಡಬೇಕು, ಕೇವಲ ಹೆಸರಿಗೆ ಮಾತ್ರ ಶಾಸಕರ ಹೆಸರನ್ನು ಅವರ ಗಮನಕ್ಕೂ ತಾರದೆ ಅಧ್ಯಕ್ಷತೆಗೆ ಹಾಕಿಕೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಶಾಸಕ ಕುಮಾರಸ್ವಾಮಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ₹50 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಯೋಗೇಶ್ವರ್ ರಾಜಕೀಯ ಮಾಡಲು ಹೊರಟಿದ್ದಾರೆ. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಇದು ನನ್ನ ಪ್ರಯತ್ನದ ಫಲ ಎಂದು ಬಿಂಬಿಸಲು ಹೊರಟಿದ್ದಾರೆ. ಈ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಜೆಡಿಎಸ್ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಸವಾಲು ಹಾಕಿದ್ದಾರೆ.

ಈ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ಮುಖಂಡರು, ನಾವು ಕಾರ್ಯಕ್ರಮ ಮಾಡಿಯೇ ತೀರುತ್ತೇವೆ. ಇದು ನಮ್ಮ ಪಕ್ಷದ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುವ ಅನುದಾನ. ನಮ್ಮ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರದ ಶಿಷ್ಟಾಚಾರ ನಿಯಮದಂತೆ ಶಾಸಕ ಕುಮಾರಸ್ವಾಮಿ ಅವರ ಹೆಸರನ್ನು ಅಧ್ಯಕ್ಷತೆಗೆ ಹಾಕಿಕೊಂಡಿದ್ದೇವೆ. ಯಾರನ್ನೂ ಬಿಟ್ಟು ಕಾರ್ಯಕ್ರಮ ಮಾಡುತ್ತಿಲ್ಲ. ಇದರಲ್ಲಿ ತಪ್ಪೇನಿದೆ ಎಂದು ವಾದಿಸುತ್ತಿದ್ದಾರೆ.

ಈ ಮೂಲಕ ತಾಲ್ಲೂಕಿನಲ್ಲಿ ಅಭಿವೃದ್ಧಿ ವಿಚಾರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ಲಾಭದಾಟಕ್ಕೆ ಮತ್ತೊಂದು ವೇದಿಕೆ ಸಿಕ್ಕಿದ್ದು, ಶನಿವಾರದ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.