ADVERTISEMENT

ಚನ್ನಪಟ್ಟಣ | ಕೊಚ್ಚಿ ಹೋದ ಸೇತುವೆ ಸಿಗದ ಕಾಯಕಲ್ಪ

ಕೊಂಡಾಪುರ–ಬಾಣಗಹಳ್ಳಿ ರಸ್ತೆಯಲ್ಲಿ ಕಣ್ವ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ

ಎಚ್.ಎಂ.ರಮೇಶ್
Published 13 ನವೆಂಬರ್ 2023, 4:42 IST
Last Updated 13 ನವೆಂಬರ್ 2023, 4:42 IST
ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಬಾಣಗಹಳ್ಳಿ ರಸ್ತೆಯಲ್ಲಿ ಕಣ್ವ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದ್ದ ಸೇತುವೆ ಕೊಚ್ಚಿಹೋಗಿರುವ ದೃಶ್ಯ
ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಬಾಣಗಹಳ್ಳಿ ರಸ್ತೆಯಲ್ಲಿ ಕಣ್ವ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದ್ದ ಸೇತುವೆ ಕೊಚ್ಚಿಹೋಗಿರುವ ದೃಶ್ಯ   

ಚನ್ನಪಟ್ಟಣ: ತಾಲ್ಲೂಕಿನ ಕೊಂಡಾಪುರ ಬಾಣಗಹಳ್ಳಿ ರಸ್ತೆಯಲ್ಲಿ ಕಣ್ವ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿಹೋಗಿ ವರ್ಷವೇ ಕಳೆದಿದೆ. ಸೇತುವೆ ಮರು ನಿರ್ಮಾಣವಾಗದೆ ಈ ಭಾಗದ ಜನರು ನದಿ ದಾಟಲು ಸಂಕಷ್ಟ ಎದುರಿಸುವಂತಾಗಿದೆ.

2021ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 50-54 ಯೋಜನೆಯಡಿ ಸುಮಾರು ₹36 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿದ್ದ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿ ಕೇವಲ ಒಂದು ವರ್ಷ ಕಳೆಯುವುದರೊಳಗೆ 2022ರ ಆಗಸ್ಟ್ ತಿಂಗಳಿನಲ್ಲಿ ನದಿನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿತ್ತು.

ಸೇತುವೆ ಮರು ನಿರ್ಮಾಣ ಮಾಡುವ ಕಾರ್ಯಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಮುಂದಾಗಿಲ್ಲ ಎಂದು ಈ ಭಾಗದ ಸಾರ್ವಜನಿಕರು ಆರೋಪಿಸುತ್ತಾರೆ.

ADVERTISEMENT

ಕೋಡಂಬಹಳ್ಳಿ, ಮಾದಾಪುರ, ಅಂಬಾಡಹಳ್ಳಿ, ಎಲೇತೋಟದಹಳ್ಳಿ, ಕೊಂಡಾಪುರ, ಬಾಣಗಹಳ್ಳಿ, ಕಾಲಿಕೆರೆ, ಸೋಗಾಲ, ಇಗ್ಗಲೂರು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಪ್ರತಿನಿತ್ಯ ಈ ಭಾಗದ ನೂರಾರು ಜನ ಈ ಸೇತುವೆ ಮುಖಾಂತರ ಸಂಚರಿಸುತ್ತಿದ್ದರು. ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಮುರಿದು ಬಿದ್ದು ವರ್ಷ ಕಳೆದಿದ್ದರೂ ಕೂಡ ಅದನ್ನು ರುನಿರ್ಮಾಣ ಮಾಡಿಲ್ಲ.

ಈ ಭಾಗದ ಜನರು ತಾಲ್ಲೂಕಿನ ಹುಣಸನಹಳ್ಳಿ ಬಳಿ ನಿರ್ಮಾಣ ಮಾಡಿರುವ ಸೇತುವೆ ಬಳಸಬೇಕು. ಸುಮಾರು 8 ಕಿ.ಮೀ ಸುತ್ತಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಈ ಭಾಗದ ಜನರು ನೋವು ತೋಡಿಕೊಳ್ಳುತ್ತಾರೆ.

ಹತ್ತಾರು ಗ್ರಾಮಗಳ ಜನಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೊಂಡಾಪುರ-ಬಾಣಗಹಳ್ಳಿ ಮಧ್ಯೆ 2021ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಸುಮಾರು ₹36ಲಕ್ಷ ಅನುದಾನವೂ ಬಿಡುಗಡೆಯಾಗಿತ್ತು. ಈ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಆನ್‌ಲೈನ್ ಮುಖಾಂತರ ಬೆಂಗಳೂರಿನ ಗುತ್ತಿಗೆದಾರರೊಬ್ಬರು ಪಡೆದುಕೊಂಡಿದ್ದರು. ಅವರು ಅದನ್ನು ಮತ್ತೊಬ್ಬ ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ವಹಿಸಿದ್ದರು.

ತುಂಡು ಗುತ್ತಿಗೆ ಪಡೆದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಸೇತುವೆ ಕಡಿಮೆ ಅವಧಿಯಲ್ಲಿಯೇ ಕೊಚ್ಚಿ ಹೋಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸೇತುವೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಶೀಘ್ರವಾಗಿ ಸೇತುವೆ ಮರು ನಿರ್ಮಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಘೋಷಿಸಿದ್ದರು. ಆದರೆ, ಒಂದು ವರ್ಷ ಕಳೆದಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ಕಾಮಗಾರಿಯೂ ಆರಂಭಗೊಳ್ಳಲಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಸೇತುವೆ ಕೊಚ್ಚಿ ಹೋದ ನಂತರ ಸಂಚಾರಕ್ಕೆ ಸಮಸ್ಯೆಯಾದ ಕಾರಣ ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ನದಿಗೆ ಸಣ್ಣದೊಂದು ಪೈಪ್ ಅಳವಡಿಸಿ ತಾತ್ಕಾಲಿಕವಾಗಿ ಮಣ್ಣು ಸುರಿದು ಜನಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ಈ ಮಣ್ಣು ಸಹ ನೀರು ಪಾಲಾಗಿದೆ. ಈ ಮಣ್ಣು ಕೊಚ್ಚಿಹೋಗಿರುವ ಕಾರಣ ವಾಹನ ಸವಾರರು ಅತಿ ಎಚ್ಚರಿಕೆಯಿಂದ ಇಲ್ಲಿ ಚಲಿಸಬೇಕಾಗಿದೆ.

ಅಪಾಯಕಾರಿ ಮಣ್ಣಿನ ರಸ್ತೆ:ಸೇತುವೆ ಬಳಿ ಪೈಪ್ ಹಾಕಿ ಮಣ್ಣು ಮುಚ್ಚಿ ಸಣ್ಣ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಇದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಕೇವಲ ದ್ವಿಚಕ್ರ ವಾಹನಗಳು ಮಾತ್ರ ಚಲಿಸುವ ಸ್ಥಿತಿಯಲ್ಲಿರುವ ಮಣ್ಣಿನ ರಸ್ತೆಯಲ್ಲಿ ಎತ್ತಿನಗಾಡಿ, ಆಟೊ ಅಥವಾ ಕಾರು ಬಂದರೆ ನದಿಗೆ ಬೀಳುವ ಅಪಾಯ ಎದುರಾಗುತ್ತದೆ. ಹಾಗಾಗಿ ಈ ರಸ್ತೆಯಲ್ಲಿ ಎತ್ತಿನಗಾಡಿ, ಆಟೊ, ಕಾರು ಓಡಾಡುವುದನ್ನೇ ನಿಲ್ಲಿಸಿವೆ.

ಈ ಭಾಗದಲ್ಲಿ ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಸೇತುವೆ ಮರುನಿರ್ಮಿಸುವ ಭರವಸೆ ನೀಡಿ ತೆರಳಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನೂ ಇತ್ತ ಸುಳಿಯದಿರುವುದು ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಶೀಘ್ರ ಈ ಸೇತುವೆ ಮರುನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.‌

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜೆಇ ಸತ್ಯಪ್ರಕಾಶ್ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

ಕೊಚ್ಚಿಹೋಗಿರುವ ಸೇತುವೆ ಅವಶೇಷಗಳು ನದಿಯಲ್ಲಿ ಬಿದ್ದಿರುವುದು
ತಾತ್ಕಾಲಿಕವಾಗಿ ಮಣ್ಣುಹಾಕಿ ನಿರ್ಮಾಣ ಮಾಡಿದ್ದ ಸಣ್ಣರಸ್ತೆ ಕೊಚ್ಚಿಹೋಗಿರುವುದು
ಅಪಾಯಕಾರಿ ಮಣ್ಣಿನ ಸಣ್ಣ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರ
ಜಯಸಿಂಹ
ಕೆ.ಎಸ್. ನಾಗರಾಜು

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಕೊಂಡಾಪುರ-ಬಾಣಗಹಳ್ಳಿ ಮಾರ್ಗದಲ್ಲಿ ಕಣ್ವ ನದಿಗೆ ಸೇತುವೆ ಅತಿ ಅವಶ್ಯಕವಾಗಿದೆ.‌ ಸೇತುವೆ ಇಲ್ಲದೆ ಈ ಭಾಗದ ಜನ ಸಮಸ್ಯೆ ಎದುರಿಸುವಂತಾಗಿದೆ. ಸೇತುವೆ ಕುಸಿದು ಬಿತ್ತು ವರ್ಷ ಕಳೆದಿದ್ದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸೇತುವೆ ಮರು ನಿರ್ಮಾಣಕ್ಕೆ ಮುಂದಾಗಿಲ್ಲ. ಇಲ್ಲಿ ಸೇತುವೆ ಇಲ್ಲದೆ ಈ ಭಾಗದ ಜನ ಹತ್ತಾರು ಕಿ.ಮಿ.ಸುತ್ತಾಡಿಕೊಂಡು ಸಂಚಾರ ಮಾಡುವಂತಾಗಿದೆ. ಸಂಬಂದಪಟ್ಟವರು ಸೇತುವೆ ಶೀಘ್ರ ಮರು ನಿರ್ಮಾಣ ಮಾಡಬೇಕು. ಜೊತೆಗೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. - ಜಯಸಿಂಹ ಬಾಣಗಹಳ್ಳಿ ಕಲಾವಿದ

ಸೇತುವೆ ಮರು ನಿರ್ಮಾಣ ಮಾಡಿ ಕೋಡಂಬಹಳ್ಳಿ ಈ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೋಡಂಬಹಳ್ಳಿಗೆ ದಿನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರು ಬರುವ ಮಾರ್ಗದಲ್ಲಿ ಇದ್ದ ಈ ಸೇತುವೆ ಕೊಚ್ಚಿ ಹೋಗಿರುವ ಕಾರಣ ತೊಂದರೆಯಾಗುತ್ತಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೊಚ್ಚಿಹೋಗಿದೆ. ಮರು ನಿರ್ಮಾಣಕ್ಕೆ ಮುಂದಾಗಬೇಕು.  ಕೆ.ಎಸ್.ನಾಗರಾಜು ಮುಖಂಡ ಕೋಡಂಬಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.