ಬಾಲ ಕಾರ್ಮಿಕರು
(ಪ್ರಾತಿನಿಧಿಕ ಚಿತ್ರ)
ರಾಮನಗರ: ಬಾಲ ಕಾರ್ಮಿಕ ಪದ್ದತಿ ವಿರುದ್ಧ ನಿರಂತರ ಕಾರ್ಯಾಚರಣೆಗೆ ಇಳಿದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು, ಮೂರು ವರ್ಷದಲ್ಲಿ 753 ಕಡೆ ದಾಳಿ ನಡೆಸಿದ್ದಾರೆ. ಫ್ಯಾಕ್ಟರಿ, ಫಿಲೇಚರ್, ಗ್ಯಾರೇಜ್, ಅಂಗಡಿ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿದ್ದ 82 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ರಕ್ಷಿಸಿರುವ ಬಾಲ ಕಾರ್ಮಿಕರ ಪೈಕಿ ತಂದೆ–ತಾಯಿ ಇಲ್ಲದೆ ಅನಾಥರು, ಓದಿನಲ್ಲಿ ಆಸಕ್ತಿ ಇಲ್ಲದವರು, ತಂದೆ–ತಾಯಿ ನಡುವಣ ಜಗಳದ ಕಾರಣಕ್ಕೆ ಮನೆ ಬಿಟ್ಟು ಬಂದವರು ಒಂದೆಡೆಯಾದರೆ, ಕಿತ್ತು ತಿನ್ನುವ ಬಡತನ ಹಾಗೂ ತಂದೆ–ತಾಯಿ ಮಾಡಿದ ಸಾಲದ ಕಾರಣಕ್ಕೆ ಬಾಲ ಕಾರ್ಮಿಕರಾಗಿ ಎಳೆ ವಯಸ್ಸಿನಲ್ಲೇ ದುಡಿಮೆ ಆರಂಭಿಸಿದವರಿದ್ದಾರೆ.
ರಾಮನಗರದಲ್ಲೇ ಹೆಚ್ಚು: ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ರಾಮನಗರದಲ್ಲಿ ಅತಿ ಹೆಚ್ಚು 41 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಉಳಿದಂತೆ ಮಾಗಡಿಯಲ್ಲಿ ಅತಿ ಕಡಿಮೆ ಕೇವಲ 6 ಬಾಲ ಕಾರ್ಮಿಕರಷ್ಟೇ ಪತ್ತೆಯಾಗಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು 287 ದಾಳಿಗಳು ನಡೆದಿದ್ದು, ಮಾಗಡಿಯಲ್ಲಿ ಅತಿ ಕಡಿಮೆ 89 ದಾಳಿಗಳು ನಡೆದಿವೆ.
ಬಹುತೇಕ ಬಾಲ ಕಾರ್ಮಿಕರು ಗ್ಯಾರೇಜ್, ಫಿಲೇಚರ್, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಬೇಕರಿ, ಜಮೀನು, ಇಟ್ಟಿಗೆ ಗೂಡು, ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಪತ್ತೆಯಾಗಿದ್ದಾರೆ. ಕೆಲ ಪ್ರಕರಣಗಳಲ್ಲಿ ತಂದೆ–ತಾಯಿಯೇ ತಮ್ಮ ಮಕ್ಕಳನ್ನು ಬಾಲ ಕಾರ್ಮಿಕ ಪದ್ದತಿಗೆ ದೂಡಿರುವುದು ಕಂಡುಬಂದಿದೆ.
ವಿವಿಧ ಮೂಲದಿಂದ ಮಾಹಿತಿ: ‘ತಾಲ್ಲೂಕು ಮಟ್ಟದ ಕಾರ್ಮಿಕ ನಿರೀಕ್ಷಕ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಒಳಗೊಂಡ ತಂಡವು ಬಾಲ ಕಾರ್ಮಿಕ ಪದ್ಧತಿ ಕುರಿತು ವಿವಿಧ ಮೂಲಗಳಿಂದ ಬರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸುತ್ತದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮಗೆ ಬರುವ ದೂರಿನ ಜೊತೆಗೆ, ಮಕ್ಕಳ ಸಹಾಯವಾಣಿ– 1098 ಟೋಲ್ ಫ್ರೀ ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಿ ಬಾಲ ಕಾರ್ಮಿಕರ ಕುರಿತು ಮಾಹಿತಿ ನೀಡುತ್ತಾರೆ. ಅಂತಹವರ ವಿವರವನ್ನು ಗೋಪ್ಯವಾಗಿಟ್ಟು, ಮಾಹಿತಿಯನ್ನು ಖಚಿತಪಡಿಸಿಕೊಂಡು ದಾಳಿ ಮಾಡಲಾಗುತ್ತದೆ.
ಜೊತೆಗೆ ಕಾರ್ಮಿಕ ನಿರೀಕ್ಷಕರು ಆಗಾಗ ದಾಳಿ ನಡೆಸುತ್ತಿರುತ್ತಾರೆ’ ಎಂದು ಹೇಳಿದರು.
ರಕ್ಷಿಸಿದ ಬಾಲ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುತ್ತದೆ. ಸಮಿತಿ ಅವರ ಬಗ್ಗೆ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತದೆ. ಮತ್ತೊಂದೆಡೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮಕ್ಕಳಿಂದ ದುಡಿಸಿಕೊಂಡ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.
ಎಫ್‌ಐಆರ್: ‘ರಕ್ಷಿಸಿದ ಮಕ್ಕಳನ್ನು ನಾವು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸುತ್ತೇವೆ. ಸಮಿತಿ ಮಕ್ಕಳನ್ನು ಸರ್ಕಾರಿ ಬಾಲಮಂದಿರದಲ್ಲಿ ವಾರದ ಮಟ್ಟಿಗೆ ಇರಿಸುತ್ತದೆ. ಈ ಅವಧಿಯಲ್ಲಿ ಸಮಿತಿಯು ಮಕ್ಕಳ ಪಾಲಕರನ್ನು ಕರೆಸಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸುತ್ತದೆ. ಮತ್ತೆ ಕೆಲಸಕ್ಕೆ ಕಳಿಸದಂತೆ ಮುಚ್ಚಳಿಕೆ ಬರೆಯಿಸಿಕೊಂಡು ಮಕ್ಕಳನ್ನು ಕಳಿಸುತ್ತದೆ’ ಎಂದು ನಾಗೇಂದ್ರ ತಿಳಿಸಿದರು.
‘ಮಕ್ಕಳಿಂದ ಕೆಲಸ ಮಾಡಿಸಿಕೊಂಡ ಮತ್ತೊಂದೆಡೆ ಇಲಾಖೆಯು ಮ ಕೊಂಡ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ. ಪೊಲೀಸರು ಎಫ್‌ಐಆರ್ ದಾಖಲಸಿಕೊಂಡು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಾರೆ. ಕೋರ್ಟ್ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುತ್ತದೆ’ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ದತಿ ವಿರುದ್ಧ ನಿಯಮಿತವಾಗಿ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸುವ ಇಲಾಖೆಯು ಈ ಪದ್ಧತಿ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಬಾಲ ಕಾರ್ಮಿಕರು ಕಂಡುಬಂದರೆ ಸಾರ್ವಜನಿಕರು ಕೂಡಲೇ ಮಾಹಿತಿ ನೀಡಬೇಕುನಾಗೇಂದ್ರ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾರ್ಮಿಕ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
₹7.60 ಲಕ್ಷ ಕಾರ್ಪಸ್ ನಿಧಿ ಸಂಗ್ರಹ
14 ವರ್ಷದೊಳಗಿನ ಮಕ್ಕಳು ಫ್ಯಾಕ್ಟರಿ ಸೇರಿದಂತೆ ವಿವಿಧೆಡೆ ಅಪಾಯಕಾರಿ ಕೆಲಸ ಮಾಡುವುದು ಕಂಡುಬಂದರೆ ಅವರು ಕೆಲಸ ಮಾಡುವ ಫ್ಯಾಕ್ಟರಿ ಅಥವಾ ಇತರ ಸಂಸ್ಥೆಗಳಿಂದ ₹20 ಸಾವಿರ ಕಾರ್ಪಸ್ ಫಂಡ್ (ಮೂಲನಿಧಿ) ಸಂಗ್ರಹಿಸಲಾಗುತ್ತದೆ. ಆ ಮೊತ್ತಕ್ಕೆ ಕಾರ್ಮಿಕ ಇಲಾಖೆ ₹15 ಸಾವಿರ ಸೇರಿಸಿ ಒಟ್ಟು ₹35 ಸಾವಿರವನ್ನು ಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿ (ಎಫ್.ಡಿ) ಇಡಲಾಗುತ್ತದೆ. ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ₹35 ಸಾವಿರ ಮೊತ್ತವನ್ನು ಬಡ್ಡಿ ಸಮೇತ ನೀಡಲಾಗುತ್ತದೆ. ಈ ರೀತಿ ಕಳೆದ 3 ವರ್ಷದಲ್ಲಿ 35 ಪ್ರಕರಣಗಳಲ್ಲಿ ₹7.60 ಲಕ್ಷ ಸಂಗ್ರಹಿಸಲಾಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ತಿಳಿಸಿದರು.
Cut-off box - ಕಾಯ್ದೆ ಹೇಳುವುದೇನು? ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ– 1986ರ ಪ್ರಕಾರ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ಯಾವುದೇ ರೀತಿಯ ಕೆಲಸಕ್ಕೆ ನಿಯೋಜಿಸಿಕೊಳ್ಳುವಂತಿಲ್ಲ. ಕಾಯ್ದೆ ಉಲ್ಲಂಘಿಸಿದ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹20 ಸಾವಿರದಿಂದ ₹50 ಸಾವಿರದವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕೆ 1ರಿಂದ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಪೋಷಕರೇ ಅಪರಾಧಿಗಳಾಗಿದ್ದಲ್ಲಿ ₹10 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.