ADVERTISEMENT

ರಾಮನಗರದೊಳಗೆ ಮತ್ತೆ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 10:19 IST
Last Updated 29 ಜೂನ್ 2019, 10:19 IST
ರಾಘವೇಂದ್ರ ಕಾಲೊನಿಯಲ್ಲಿ ಚಿರತೆ ಸೆರೆಗೆ ಬೋನು ಇರಿಸಿರುವುದು
ರಾಘವೇಂದ್ರ ಕಾಲೊನಿಯಲ್ಲಿ ಚಿರತೆ ಸೆರೆಗೆ ಬೋನು ಇರಿಸಿರುವುದು   

ರಾಮನಗರ: ನಗರ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಅರ್ಕಾವತಿ ದಡಕ್ಕೆ ಹೊಂದಿಕೊಂಡಂತೆ ಇರುವ ರಾಘವೇಂದ್ರ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ಚಿರತೆ ಕಾಣಿಸಿಕೊಂಡಿತು. ಆರಂಭದಲ್ಲಿ ನಾಯಿ ಇರಬೇಕು ಎಂದು ಭಾವಿಸಿ ಹತ್ತಿರಕ್ಕೆ ಹೋಗಿದ್ದ ಸ್ಥಳೀಯರು ಚಿರತೆ ಕಂಡು ಬೆಚ್ಚಿ ಬಿದ್ದರು. ಬಳಿಕ ಅರಣ್ಯ ಇಲಾಖೆಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.

ಅಷ್ಟರಲ್ಲಿ ಆಗಲೇ ಚಿರತೆ ಮನೆಯ ಮಹಡಿ ಏರಿತ್ತು. ಸುದ್ದಿ ತಿಳಿದು ಸಾಕಷ್ಟು ಜನರು ನೆರೆದರು. ಇದರಿಂದ ಗಾಬರಿಗೊಂಡ ಚಿರತೆಯು ಅಲ್ಲಿಂದ ಹಾರಿ ಪರಾರಿಯಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬೋನು ಇರಿಸಿದ್ದಾರೆ.

ADVERTISEMENT

ವಾರಗಳ ಅಂತರದಲ್ಲಿ ಮತ್ತೆ ಮತ್ತೆ ಕಾಡುಪ್ರಾಣಿಗಳು ನಗರದೊಳಗೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನದ ಹಿಂದಷ್ಟೇ ಇದೇ ಕಾಲೊನಿಯಲ್ಲಿ ಚಿರತೆಯೊಂದು ದಾಳಿ ನಡೆಸಿ ಸಾಕುನಾಯಿಯನ್ನು ಕೊಂದು ಹಾಕಿತ್ತು. ಈಚೆಗೆ ನಾಲ್ಕೈದು ಬೀದಿನಾಯಿಗಳನ್ನೂ ಅದು ಹೊತ್ತೊಯ್ದಿರುವುದಾಗಿ ಸ್ಥಳೀಯರು ಹೇಳುತ್ತಾರೆ.

ನಗರದ ಹೃದಯ ಭಾಗದಲ್ಲಿಯೇ ಕಾಡುಪ್ರಾಣಿಗಳು ದಾಳಿ ನಡೆಸುತ್ತಿರುವುದು ಜನರ ನಿದ್ದೆಗೆಡಿಸಿದೆ. ಅರ್ಕಾವತಿ ನದಿಯ ಒಳಗಿನ ಜೊಂಡು ಪೊದೆಗಳಲ್ಲಿ ಈ ವನಮೃಗಗಳು ಆಶ್ರಯ ಪಡೆದು ನಗರದಲ್ಲೇ ನೆಲೆ ಕಂಡುಕೊಂಡಿವೆ ಎಂದು ಜನರು ಹೇಳುತ್ತಾರೆ. ಇವುಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.