ADVERTISEMENT

ಕನಕಪುರ: ಪ್ರವಾಸಿಗರ ನೆಚ್ಚಿನ ತಾಣ ಚುಳುಕನಬೆಟ್ಟ

ದೇಗುಲ ಜೀರ್ಣೋದ್ಧಾರ ಸಮಿತಿಯಿಂದ ಕುಡಿಯುವ ನೀರು, ದಾಸೋಹ, ಅಡುಗೆ ಮನೆ ನಿರ್ಮಾಣ

ಬರಡನಹಳ್ಳಿ ಕೃಷ್ಣಮೂರ್ತಿ
Published 23 ಜನವರಿ 2023, 4:21 IST
Last Updated 23 ಜನವರಿ 2023, 4:21 IST
ಚುಳುಕನಬೆಟ್ಟ ಭೈರವೇಶ್ವರನ ಕ್ಷೇತ್ರದಲ್ಲಿ ನಿರ್ಮಿಸಿರುವ ಭೈರವೇಶ್ವರನ ಮೂರ್ತಿ
ಚುಳುಕನಬೆಟ್ಟ ಭೈರವೇಶ್ವರನ ಕ್ಷೇತ್ರದಲ್ಲಿ ನಿರ್ಮಿಸಿರುವ ಭೈರವೇಶ್ವರನ ಮೂರ್ತಿ   

ಕನಕಪುರ: ಕಾಲಭೈರವೇಶ್ವರನ ಕ್ಷೇತ್ರವೆಂದು ಪ್ರಸಿದ್ಧಿಯಾಗಿರುವ ಚುಳುಕನಬೆಟ್ಟದ (ಚುಳುಕನಗಿರಿ) ಹಸಿರು ಪರಿಸರ, ಪ್ರಶಾಂತ ವಾತಾವರಣ ಮತ್ತು ಕಡಿದಾದ ಬೆಟ್ಟ ಚಾರಣಿಗರ ಜೊತೆ ಪ್ರವಾಸಿಗರನ್ನೂ ಸೆಳೆಯುತ್ತಿದೆ.

ಹಾರೋಹಳ್ಳಿ–ಆನೇಕಲ್‌ ರಸ್ತೆಯ ಅಂಚಿಬೋರೆ ಬಳಿಯ ಬೆಟ್ಟಕ್ಕೆ ಪಾರಂಪರಿಕ ಹಿನ್ನೆಲೆಯೂ ಇದೆ. ಕಾಲಭೈರವೇಶ್ವರನ ಈ ಬೆಟ್ಟ ಚುಳುಕನ ಬೆಟ್ಟ ಮತ್ತು ಅದರ ಮುಂದಿರುವ ಕೆರೆ ಚುಳುಕನ ಕೆರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ.

ಬೆಟ್ಟದ ಮೇಲಿರುವ ಕಾಲಭೈರವೇಶ್ವರ ದೇವಾಲಯಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಪುಟ್ಟದಾಗಿದ್ದ ದೇಗುಲ ಅಭಿವೃದ್ಧಿಗೊಂಡಿದೆ. ನಾಡ ದೇವತೆ ಮಾರಮ್ಮ, ಮುತ್ತಪ್ಪನ ದೇವಸ್ಥಾನಗಳೂ ಇಲ್ಲಿವೆ. ಯುಗಾದಿ ಸಮಯದಲ್ಲಿ ಚುಂಚನಗಿರಿಯಂತೆಯೇ ಇಲ್ಲಿಯೂ ಭೈರವೇಶ್ವರನ ಜಾತ್ರೆ ನಡೆಯುತ್ತದೆ. ತಳಿ ಮತ್ತು ಆನೇಕಲ್‌, ಬೆಂಗಳೂರು, ರಾಮನಗರ ಜಿಲ್ಲೆಯಿಂದ ಭಕ್ತರು ಬರುತ್ತಾರೆ.

ADVERTISEMENT

ದೇವಾಲಯ ಜೀರ್ಣೋದ್ಧಾರ ಸಮಿತಿ ಮೂಲಕ ಬೆಟ್ಟದ ತಳಭಾಗದ ಪ್ರದೇಶವನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ಮನೆ, ಅಡುಗೆ ಮನೆ ನಿರ್ಮಿಸಲಾಗಿದೆ. ಚುಂಚನಗಿರಿಯ ರೀತಿಯಲ್ಲಿ ಅಭಿವೃದ್ಧಿ ಮಾಡಿ ಎರಡನೇ ಚುಂಚನಗಿರಿಯಾಗಿ ಮಾಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ಬೆಂಗಳೂರಿಗೆ ಸಮೀಪದಲ್ಲಿರುವ ನೂರಾರು ಎಕರೆ ಭೂ ಪ್ರದೇಶದ ಚುಳುಕನ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ. ಈ ಬೆಟ್ಟವು ಚಾರಣಿಗರ ನೆಚ್ಚಿನ ತಾಣವಾಗಿದ್ದು ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಇಲ್ಲಿಗೆ ಬರುತ್ತಾರೆ.

ನಿವೃತ್ತ ಎಎಸ್‌ಐ ಪ್ರಭುಸ್ವಾಮಿ ನೇತೃತ್ವದಲ್ಲಿ ಚುಳುಕನ ಗಿರಿಯನ್ನು ಸಂರಕ್ಷಿಸಲು ‘ಗಿರಿ ಪ್ರದಕ್ಷಿಣೆ’ ಸಮಿತಿ ರಚನೆಯಾಗಿದೆ. ಸಮತಿಯು ಪ್ರತಿ ಹುಣ್ಣಿಮೆ ದಿನ ಗಿರಿ ಪ್ರದಕ್ಷಿಣೆ ಮಾಡುತ್ತದೆ. ಸಮಿತಿಯಲ್ಲಿ 300ಕ್ಕೂ ಹೆಚ್ಚು ಸದಸ್ಯರಿದ್ದು ಗಿರಿ ಪ್ರದಕ್ಷಿಣೆ ನಂತರ ಚಂದ್ರನ ಬೆಳಕಿನಲ್ಲಿ ಉಪಾಹಾರ ಸೇವಿಸುತ್ತಾರೆ.

ಪರಿಸರ ಉಳಿಸಬೇಕು. ಜನರ ಆರೋಗ್ಯ ಕಾಪಾಡಬೇಕು. ಮರಗಳನ್ನು ಬೆಳೆಸಬೇಕು ಎಂಬುವುದು ಈ ಸಮಿತಿಯ ಧ್ಯೇಯ. ಈಗಾಗಲೆ 300 ಕ್ಕೂ ಹೆಚ್ಚು ಮರಗಳನ್ನು ಸಮಿತಿ ಇಲ್ಲಿ ಬೆಳಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.