ADVERTISEMENT

ಅಧ್ಯಕ್ಷ, ಸದಸ್ಯರ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ಬೆಳಗ್ಗೆಯಿಂದ ಸಂಜೆವರೆಗೆ ನಗರ ಸುತ್ತಾಟ; ಜನರಿಂದ ಅಭಿಪ್ರಾಯ ಆಲಿಕೆ; ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:53 IST
Last Updated 10 ಜುಲೈ 2025, 18:53 IST
ರಾಮನಗರದ ಗಾಂಧಿನಗರದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಸದಸ್ಯರು ವೀಕ್ಷಿಸಿದರು 
ರಾಮನಗರದ ಗಾಂಧಿನಗರದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಸದಸ್ಯರು ವೀಕ್ಷಿಸಿದರು    

ರಾಮನಗರ: ನಗರದ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್) ಯೋಜನೆಯಡಿ ನಗರದ ವಿವಿಧೆಡೆ ‌ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಸದಸ್ಯರು ಗುರುವಾರ ವೀಕ್ಷಿಸಿ ಪರಿಶೀಲಿಸಿದರು. ಅಧಿಕಾರಿಗಳನ್ನು ಸಹ ಜೊತೆಗೆ ಕರೆದೊಯ್ದು ವಿವಿಧ ವಾರ್ಡ್‌ಗಳಲ್ಲಿ ಕಾಲ್ನಡಿಗೆಯಲ್ಲೇ ಸುತ್ತಾಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.

ವಿಜಯನಗರ, ಗಾಂಧಿನಗರ, ಕಾಯಿಸೊಪ್ಪಿನ ಬೀದಿ, ವಿವೇಕಾನಂದನಗರ, ಯಾರಬ್ ನಗರ, ಎಂ.ಜಿ. ರಸ್ತೆ ಸೇರಿದಂತೆ ವಿವಿಧೆಡೆ ಸುತ್ತಾಡಿದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು, ಕಾಮಗಾರಿ ಕುರಿತು ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿದರು. ಕಾಮಗಾರಿ ಬಗ್ಗೆ ಬಂದ ದೂರುಗಳು ಹಾಗೂ ಲೋಷದೋಷಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರ ಪ್ರದಕ್ಷಿಣೆ ಬಳಿಕ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೇಷಾದ್ರಿ, ‘ನಗರಸಭೆಗೆ ₹82.5 ಕೋಟಿ ಯುಐಡಿಎಫ್ ಅನುದಾನ ಸಿಕ್ಕಿದೆ. ಆ ಪೈಕಿ ₹60 ಕೋಟಿಯಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದೆ. ಸಿಮೆಂಟ್ ರಸ್ತೆ ನಿರ್ಮಾಣ, ಹದಗೆಟ್ಟ ರಸ್ತೆ ದುರಸ್ತಿ ಸೇರಿದಂತೆ ಒಟ್ಟು 57 ಕಿ.ಮೀ. ಉದ್ದದ ರಸ್ತೆಗೆ ಅಭಿವೃದ್ಧಿ ಭಾಗ್ಯ ಸಿಕ್ಕಿದೆ. ಉಳಿದ ಅನುದಾನದ ಮೊತ್ತ ಸೀರಳ್ಳದ ತಡೆಗೋಡೆ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ’ ಎಂದರು.

ADVERTISEMENT

‘ಐಜೂರು ಭಾಗದ 6 ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರ ಕಾಮಗಾರಿ ಶುರುವಾಗಲಿದೆ. ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಸುಮಾರು ₹19.50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇನ್ನೂ ಕೆಲ ವಾರ್ಡ್‌ಗಳ ಹಲವು ಪ್ರದೇಶಗಳಲ್ಲಿ ಕಾಮಗಾರಿಗೆ ಹೆಚ್ಚಿನ ಅನುದಾನ ಬೇಕಿದೆ’ ಎಂದು ತಿಳಿಸಿದರು.

‘ನಗರದ 5ನೇ ವಾರ್ಡಿನ ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸುತ್ತಿದ್ದ ಸೇತುವೆ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಕಾಮಗಾರಿ ಭರದಿಂದ ನಡೆಯುತ್ತಿದೆ. ಸೇತುವೆ ಪೂರ್ಣಗೊಂಡರೆ ಐದಾರು ವಾರ್ಡ್‌ಗಳ ಜನರಿಗೆ ಬೆಂಗಳೂರು–ಮೈಸೂರು ಹೆದ್ದಾರಿಗೆ ಸುಲಭವಾಗಿ ಸಂಪರ್ಕ ಸಿಗಲಿದೆ’ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಮಂಜುನಾಥ್, ನಿಜಾಮುದ್ದೀನ್, ಅಜ್ಮತ್, ಮುನಜಿಲ್ ಅಗಾ, ಗೇಬ್ರಿಯಲ್, ರಮೇಶ್, ಸೋಮಶೇಖರ್ ಮಣಿ, ಪಾರ್ವತಮ್ಮ, ವಿಜಯಕುಮಾರಿ, ಜಯಲಕ್ಷ್ಮಮ್ಮ, ಪವಿತ್ರ, ಮಹಾಲಕ್ಷ್ಮಿ ಗೂಳಿಗೌಡ, ನರಸಿಂಹ, ನಾಗಮ್ಮ, ಗೋವಿಂದರಾಜು, ಸಮದ್, ಅಣ್ಣು, ಮುಖಂಡ ಶಿವಕುಮಾರಸ್ವಾಮಿ ಹಾಗೂ ಅಧಿಕಾರಿಗಳು ಇದ್ದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಜಿಲ್ಲಾ ಕೇಂದ್ರವಾಗಿರುವ ರಾಮನಗರದಲ್ಲಿ ರಸ್ತೆ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳು ಸಾಗಿವೆ

ಕೆ. ಶೇಷಾದ್ರಿ ಶಶಿ ನಗರಸಭೆ ಅಧ್ಯಕ್ಷ

ರಸ್ತೆಗುಂಡಿಗಳಿಗೆ ಮುಕ್ತಿ

ನಗರದಲ್ಲಿ ಈಗಾಗಲೇ ಶುರುವಾಗಿರುವ ವಿವಿಧ ಕರಗಗಳ ಮಹೋತ್ಸವಗಳ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ಅನಿಲ್ ಪೈಪ್‌ಲೈನ್ ಮತ್ತು ನಿರಂತರ ಕುಡಿಯುವ ನೀರಿನ ಯೋಜನೆ ಕಾರಣಕ್ಕೆ ಪ್ರಮುಖ ರಸ್ತೆಗಳು ಮತ್ತು ಗಲ್ಲಿ ರಸ್ತೆಗಳನ್ನು ಅಗೆಯಲಾಗಿತ್ತು. ಜಲಮಂಡಳಿ ಅಧಿಕಾರಿಗಳು ಮತ್ತು ಪೈಪ್‌ಲೈನ್ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಗುಂಡಿ ಮುಚ್ಚಿಸಲಾಗಿದೆ. ಚಾಮುಂಡೇಶ್ವರಿ ಸೇರಿದಂತೆ ನಗರದ 8 ಕರಗಗಳ ಮಹೋತ್ಸವಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ ಎಂದು ಶೇಷಾದ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.