ADVERTISEMENT

ರಾಮನಗರ: ಸ್ಥಳೀಯ ಸಂಸ್ಥೆಗಳಿಗೆ ಕಾರ್ಮಿಕರ ಸಂಬಳದ ಹೊರೆ

ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಗೆ ಪೌರ ಕಾರ್ಮಿಕರ ಆಕ್ರೋಶ

ಓದೇಶ ಸಕಲೇಶಪುರ
Published 8 ಫೆಬ್ರುವರಿ 2024, 5:03 IST
Last Updated 8 ಫೆಬ್ರುವರಿ 2024, 5:03 IST
<div class="paragraphs"><p>&nbsp;ಪೌರ ಕಾರ್ಮಿಕ ಮಹಿಳೆ</p></div>

 ಪೌರ ಕಾರ್ಮಿಕ ಮಹಿಳೆ

   

ಪ್ರಾತಿನಿಧಿಕ ಚಿತ್ರ

ರಾಮನಗರ: ನಗರ– ಸ್ಥಳೀಯ ಸಂಸ್ಥೆಗಳು ಒಂದು ಕಡೆ ಆದಾಯದ ಕೊರತೆಯಿಂದ ಬಳಲುತ್ತಿವೆ. ನಗರ–ಪಟ್ಟಣಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಅಭಿವೃದ್ಧಿ ಚಟುವಟಿಕೆ ಸೇರಿದಂತೆ ಇತರ ಕಾರ್ಯಗಳನ್ನು ಸರಿದೂಗಿಸಲು ಸರ್ಕಾರದ ನೆರವಿನ ಹಸ್ತ ಚಾಚುತ್ತಿವೆ. ಇಂತಹ ಹೊತ್ತಿನಲ್ಲಿ ಪೌರ ಕಾರ್ಮಿಕರ ಸಂಬಳ ಹೊರೆಯನ್ನು ಈಗ ಹೊರಬೇಕಾದ ಸ್ಥಿತಿ ಬಂದಿದೆ.

ADVERTISEMENT

ನೇರ ಪಾವತಿ ವ್ಯವಸ್ಥೆಯಿಂದ ಕಳೆದ ಎರಡು ವರ್ಷಗಳಲ್ಲಿ ಕಾಯಂ ಆಗಿರುವ 5,533 ಪೌರ ಕಾರ್ಮಿಕರ ಸಂಬಳವನ್ನು ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳೇ ಭರಿಸಬೇಕು ಎಂಬ ಸುತ್ತೋಲೆಯನ್ನು ಪೌರಾಡಳಿತ ನಿರ್ದೇಶನಾಲಯ ಬುಧವಾರ ಹೊರಡಿಸಿದೆ.

ನಿರ್ದೇಶನಾಲಯದ ಆದೇಶದ ವಿರುದ್ಧ ಪೌರ ಕಾರ್ಮಿಕರ ಹಾಗೂ ನೌಕರರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈಗಾಗಲೇ ಏದುಸಿರು ಬಿಡುತ್ತಿರುವ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳಿಗೆ (ಬಿಬಿಎಂಪಿ ಹೊರತುಪಡಿಸಿ) ಈ ಸುತ್ತೋಲೆ ಗಾಯದ ಮೇಲೆ ಬರೆ ಎಳೆದಂತಿದೆ.

ಮರಣ ಶಾಸನ:

‘ಸರ್ಕಾರವು 2022ರ ನವೆಂಬರ್‌ನಲ್ಲಿ ನೇರ ಪಾವತಿ ನೌಕರರನ್ನು ಕಾಯಂ ಮಾಡುವ ಕುರಿತು ರಾಜ್ಯಪತ್ರ ಹೊರಡಿಸಿದೆ. ಅದರಲ್ಲಿ ಕಾಯಂ ಆದವರಿಗೆ ಸ್ಥಳೀಯ ಸಂಸ್ಥೆಗಳೇ ವೇತನ ನೀಡಬೇಕು ಎಂದು ಉಲ್ಲೇಖಿಸಿಲ್ಲ. ಹೀಗಿದ್ದರೂ, ಈ ಸುತ್ತೋಲೆ ಹೊರಡಿಸಿರುವುದು ಪೌರ ಕಾರ್ಮಿಕರ ಪಾಲಿಗೆ ಮರಣ ಶಾಸನದಂತಿದೆ’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಕಾಯಂ ಆಗಿರುವವರಿಗೆ ಇದುವರೆಗೆ ಸರ್ಕಾರದ ಎಸ್‌ಎಫ್‌ಸಿ ಮುಕ್ತ ನಿಧಿಯಿಂದಲೇ ವೇತನ ಪಾವತಿಯಾಗುತ್ತಿತ್ತು. ಇದೀಗ, ಏಕಾಏಕಿಯಾಗಿ ಸರ್ಕಾರ ತನ್ನ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳ ಮೇಲೆ ಹೊರಿಸುವುದು ಎಷ್ಟು ಸರಿ? ನಿರ್ದೇಶನಾಲಯದ ಸುತ್ತೋಲೆಯು, ಸ್ಥಳೀಯ ಸಂಸ್ಥೆಗಳ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಅಧೋಗತಿಗೆ ಕೊಂಡೊಯ್ಯಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರ ಜೀವ ವಿಮೆ, ಬೆಳಿಗ್ಗೆ ಉಪಾಹಾರ, ಸಮಗ್ರ ಆರೋಗ್ಯ ತಪಾಸಣೆ, ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಏಳನೇ ವೇತನ ಆಯೋಗದ ಮಧ್ಯಂತರ ಪರಿಹಾರದ ಶೇ 17ರಷ್ಟು ಮೊತ್ತವನ್ನು ಸಹ ಸ್ಥಳೀಯ ಸಂಸ್ಥೆಗಳೇ ತಮ್ಮ ಸ್ವಂತ ನಿಧಿಯಿಂದ ಭರಿಸುವಂತೆ ಈಗಾಗಲೇ ಸುತ್ತೋಲೆಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ವೇತನದ ಹೊರೆಯನ್ನು ಸಹ ಹೊರಿಸುವುದು ಸರಿಯಲ್ಲ. ಆದಾಯದ ಮೂಲಗಳಿಲ್ಲದೆ ಬಳಲುತ್ತಿರುವ ಸ್ಥಳೀಯ ಸಂಸ್ಥೆಗಳು ಸಕಾಲಕ್ಕೆ ವೇತನ ಕೊಡದಿದ್ದರೆ, ಕಾರ್ಮಿಕರ ಬದುಕು ಬೀದಿಗೆ ಬರುವುದು ಗ್ಯಾರಂಟಿ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪೌರಾಡಳಿತ ಸಚಿವ ರಹೀಂಖಾನ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕರೆ ಮಾಡಿದಾಗ, ಸ್ವೀಕರಿಸಲಿಲ್ಲ. ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ.

ಈಗಿನ ಸಂಬಳವೇ ಸವಾಲು

‘ನಗರ ಸ್ಥಳೀಯ ಸಂಸ್ಥೆಗಳು ಈಗಾಗಲೇ ತಮ್ಮ ಸ್ವಂತ ನಿಧಿಯಿಂದ ಕಸದ ವಾಹನ ಚಾಲಕರು, ಲೋಡರ್‌ಗಳು, ಯುಜಿಡಿ ಕಾರ್ಮಿಕರು, ಕೊಳಚೆ ನೀರು ಸಂಸ್ಕರಣಾ ಘಟಕದ ಸಿಬ್ಬಂದಿ, ಬೀದಿ ದೀಪ ನಿರ್ವಹಣಾ ಸಿಬ್ಬಂದಿ, ದಿನಗೂಲಿ ನೌಕರರು, ಕಂಪ್ಯೂಟರ್ ಆಪರೇಟರ್‌, ನೀರು ಸರಬರಾಜು ಸಿಬ್ಬಂದಿ, ತ್ಯಾಜ್ಯ ವಿಂಗಡಣೆ ಕಾರ್ಮಿಕರು, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರಿಗೆ ವೇತನ ಸೇರಿದಂತೆ ಇನ್ನೂ ಹಲವು ವೆಚ್ಚಗಳನ್ನು ಭರಿಸುತ್ತಿವೆ. ಅನುದಾನ ಇಲ್ಲದಿರುವುದರಿಂದ ಬಹುತೇಕ ಸಂಸ್ಥೆಗಳು ಕೆಲವೊಮ್ಮೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ಪಾವತಿಸದೆ ವಿಳಂಬ ಮಾಡುವುದು ಸಾಮಾನ್ಯವಾಗಿದೆ. ಹೀಗಿರುವಾಗ, ಹೊಸ ಸುತ್ತೋಲೆಯು ಈಗಾಗಲೇ ಕುಸಿದಿರುವವನ ಮೇಲೆ ಮತ್ತಷ್ಟು ಭಾರ ಹೊರಿಸಿದಂತಿದೆ’ ಎಂದು ಆರ್. ನಾಗರಾಜು ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟರು.

ನಗರಾಭಿವೃದ್ಧಿಗೆ ಪತ್ರ ಬರೆದಿದ್ದ ಡಿಎಂಎ
2023–24ನೇ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕೊರತೆಯಾಗಿರುವ ವೇತನಾನುದಾನ ಬಿಡುಗಡೆಗೆ ಕೋರಿ, ಪೌರಾಡಳಿತ ನಿರ್ದೇಶನಾಲಯವು (ಡಿಎಂಎ) ನಗರಾಭಿವೃದ್ಧಿ ಇಲಾಖೆಗೆ (ಯು.ಡಿ) ಪತ್ರ ಬರೆದಿತ್ತು. ಎಸ್‌ಎಫ್‌ಸಿ ಸಾಮಾನ್ಯ ಆವರ್ತನಿಧಿಯಲ್ಲಿ ಖಾಲಿ ಹುದ್ದೆಗಳಿಗೆ ಹಂಚಿಕೆಯಾಗಿರುವ ₹120 ಕೋಟಿಯಲ್ಲಿ, ಕೊರತೆಯಾಗಿರುವ ವೇತನಾನುದಾನ ₹11.76 ಕೋಟಿಯನ್ನು ಬಿಡುಗಡೆ ಮಾಡುವಂತೆ ಡಿಎಂಎ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿತ್ತು. ಯು.ಡಿ.ಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳಿಸಿತ್ತು. ಅದನ್ನು ಇಲಾಖೆ ತಿರಸ್ಕರಿಸಿತ್ತು. ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಪೌರ ಕಾರ್ಮಿಕರ ಸಂಬಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಎಸ್‌ಎಫ್‌ಸಿ ಮುಕ್ತಿನಿಧಿಯ ಪಾಲಿನ ಮಿತಿ ಮೀರಲಿದೆ. ಹಾಗಾಗಿ, ಸ್ಥಳೀಯ ಸಂಸ್ಥೆಗಳೇ ವೇತನದ ಹಣಕಾಸು ಭರಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಈ ಕುರಿತು, ನಗರಾಭಿವೃದ್ಧಿ ಇಲಾಖೆಯು ಪೌರಾಡಳಿತ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ, ಈ ಸುತ್ತೋಲೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.