ADVERTISEMENT

ಗೂಡು ಖರೀದಿ ವಿಚಾರಕ್ಕೆ ಗಲಾಟೆ| ರೀಲರ್ಸ್‌ಗಳ ನಡುವೆ ಹೊಡೆದಾಟ

ರೇಷ್ಮೆಗೂಡು ಮಾರುಕಟ್ಟೆ: ಗೂಡು ಖರೀದಿ ವಿಷಯಕ್ಕೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 5:57 IST
Last Updated 15 ಜುಲೈ 2024, 5:57 IST
ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ನಡೆದ ರೀಲರ್ಸ್‌ಗಳ ನಡುವೆ ಜಗಳ ನಡೆದಾಗ ಜಮಾಯಿಸಿದ್ದ ಜನ
ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ನಡೆದ ರೀಲರ್ಸ್‌ಗಳ ನಡುವೆ ಜಗಳ ನಡೆದಾಗ ಜಮಾಯಿಸಿದ್ದ ಜನ   

ರಾಮನಗರ: ನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ, ರೀಲರ್ಸ್‌ಗಳ ಗುಂಪುಗಳೆರಡು ಪರಸ್ಪರ ಹೊಡೆದಾಡಿಕೊಂಡು ಘಟನೆ ಭಾನುವಾರ ನಡೆದಿದೆ. 

ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನ ರೀಲರ್ಸ್‌ಗಳು, ಮಾರುಕಟ್ಟೆಯಲ್ಲಿಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೂಡುಗಳನ್ನು ಖರೀದಿಸಿದ್ದಾರೆ ಎಂದು ಸ್ಥಳೀಯ ರೀಲರ್ಸ್‌ಗಳು ಆಕ್ಷೇಪಿಸಿದರು. ಈ ಕುರಿತು, ಎರಡೂ ಗುಂಪುಗಳ ನಡುವೆ ಶುರುವಾದ ಮಾತಿನ ಚಕಮಕಿ ತಾರಕಕ್ಕೇರಿ ನಂತರ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಗುಂಪುಗಳನ್ನು ಚದುರಿಸಿದರು.

‘ಪರವಾನಗಿ ಪಡೆದಿರುವ ರೀಲರ್‌ಗಳಾದ ನಾವು ಎಂದಿನಂತೆ ಮಾರುಕಟ್ಟೆಯಲ್ಲಿ ಗೂಡು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ತೂಕ ಪ್ರಕ್ರಿಯೆ ಮುಗಿಸಿ ಹಣ ಪಾವತಿಸುವಾಗ ನಮ್ಮ ಮೇಲೆ ರಾಮನಗರದ ಮೊಹಸಿನ್, ನವಾಜ್, ಪರ್ವೇಜ್ ಹಾಗೂ ರುಮಾನ್ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಸಮೀರ್ ಅಹಮದ್ ಎಂಬುವರು ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ನಿಮ್ಮ ಊರಿನ ಮಾರುಕಟ್ಟೆಗೆ ಹೋಗಿ ಗೂಡು ಖರೀದಿಸಿ. ರಾಮನಗರದ ಮಾರುಕಟ್ಟೆಗೆ ಕಾಲಿಟ್ಟರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಮೇಲಿನ ಹಲ್ಲೆ ದೃಶ್ಯಗಳು ಮಾರುಕಟ್ಟೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ನಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಗಲಾಟೆ ಮಾಡಿಕೊಂಡ ಎರಡು ಕಡೆಯವರನ್ನು ಕರೆಯಿಸಿ ಮಾತನಾಡಿದ್ದು, ರೀಲರ್ಸ್ ಅಸೋಸಿಯೇಷನ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹಾಗಾಗಿ, ದೂರಿನ ಮೇರೆಗೆ ಎನ್‌ಸಿಆರ್‌ ಮಾಡಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.