ಚನ್ನಪಟ್ಟಣ: ರೋಟರಿ ಟಾಯ್ಸ್ ಸಿಟಿ ಕ್ಲಬ್ ವತಿಯಿಂದ ಭಾನುವಾರ ಸ್ವಚ್ಛೋತ್ಸವ– ನಿತ್ಯೋತ್ಸವ ಅಭಿಯಾನದಡಿ ತಾಲ್ಲೂಕಿನ ಕೋಡಂಬಹಳ್ಳಿ ಬಳಿಯ ಐತಿಹಾಸಿಕ ಚನ್ನಪ್ಪಸ್ವಾಮಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು.
ಈ ವೇಳೆ ಕ್ಲಬ್ ಅಧ್ಯಕ್ಷ ರಾಜೇಶ್ ಮಾತನಾಡಿ, ಬೆಟ್ಟಗಳು ಕೇವಲ ಧಾರ್ಮಿಕ ಶಕ್ತಿ ಕೇಂದ್ರ ಮಾತ್ರವಲ್ಲದೆ, ಅನೇಕ ಜೀವ ರಾಶಿಗಳನ್ನು ಹೊಂದಿರುವ ಅರಣ್ಯ ಪ್ರದೇಶವಾಗಿರುತ್ತದೆ. ಹಾಗಾಗಿ ಇಲ್ಲಿಗೆ ಬರುವ ಭಕ್ತಾದಿಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದರಲ್ಲಿ ಪರಿಸರ ನಾಶವಾಗುತ್ತದೆ. ವನ್ಯ ಜೀವಿಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛ ಮಾಡುವ ಮೂಲಕ ಬೆಟ್ಟಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಬೆಟ್ಟ ಪ್ರದೇಶಗಳಲ್ಲಿ ಎಲ್ಲಿಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಬಾರದು. ಬೆಟ್ಟದ ಪರಿಸರಕ್ಕೆ ಧಕ್ಕೆ ತರುವ ವಸ್ತುಗಳನ್ನು ದೂರವಿಡಬೇಕು. ಭಕ್ತಾದಿಗಳು ಬೆಟ್ಟದ ಪಾವಿತ್ರತೆ, ಸ್ವಚ್ಛತೆ ಕಾಪಾಡಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದೇ ನಮ್ಮ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ರೋಟರಿ ಕ್ಲಬ್ ಸದಸ್ಯರು ಶ್ರಮದಾನದ ಮೂಲಕ ಬೆಟ್ಟದ ವ್ಯಾಪ್ತಿಯಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಆಹಾರ ಪೊಟ್ಟಣ, ಪ್ಲಾಸ್ಟಿಕ್ ಲೋಟ, ತಟ್ಟೆ, ಪ್ಲಾಸ್ಟಿಕ್ ಚೀಲ ಸೇರಿದಂತೆ ಹಲವು ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಒಂದು ಕಡೆ ಸುರಿದು ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕಿದರು.
ಬಿ.ಎಂ.ನಾಗೇಶ್, ಶೇಖರ್ ಲಾಡ್, ಮೋಹನ್, ಅಪ್ಪಾಜಿಗೌಡ, ಜಯರಾಮು, ಅರ್ಜುನ್, ರೇವಣ್ಣ, ರಘು, ಚಂದ್ರಶೇಖರ್, ಮಾಸ್ತಿ ಗೌಡ, ಲೋಕೇಶ್, ವಿಜಯ್ ಕುಮಾರ್, ಮಾನಸ, ಕಲಾವತಿ, ಕವಿತಾ, ಪವಿತ್ರಾ, ಜೀವಿತಾ, ಲಾಜವಂತಿ, ಸೌಮ್ಯ, ಮೇಖಲಾ, ರೇಖಾ, ಸರ್ವಮಂಗಳಾ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.