ADVERTISEMENT

ಮಾಗಡಿ: ಗಾಂಧೀಜಿ ಜಯಂತಿ; ಸ್ವಚ್ಛತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:20 IST
Last Updated 3 ಅಕ್ಟೋಬರ್ 2021, 5:20 IST
ಮಾಗಡಿ ಪಟ್ಟಣದ ಸೋಮೇಶ್ವರ ಬಡಾವಣೆಯ ಬಿಸಿಎಂ ಮೆಟ್ರಿಕ್‌ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುನಿತಾ ಡಿ.ಆರ್‌. ಚಾಲನೆ ನೀಡಿದರು. ನಿಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು
ಮಾಗಡಿ ಪಟ್ಟಣದ ಸೋಮೇಶ್ವರ ಬಡಾವಣೆಯ ಬಿಸಿಎಂ ಮೆಟ್ರಿಕ್‌ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುನಿತಾ ಡಿ.ಆರ್‌. ಚಾಲನೆ ನೀಡಿದರು. ನಿಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು   

ಮಾಗಡಿ: ‘ಗಾಂಧೀಜಿ ಅವರು ಸ್ವಚ್ಛತೆ ಇರುವಲ್ಲಿ ದೇವರು ನೆಲೆಸಿದ್ದಾನೆ ಎಂದು ನಂಬಿದ್ದರು’ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುನಿತಾ ಡಿ.ಆರ್. ತಿಳಿಸಿದರು.

ಪಟ್ಟಣದ ಸೋಮೇಶ್ವರ ಗುಡಿ ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋಹನದಾಸ ಕರಮಚಂದ ಗಾಂಧಿ ಕಾನೂನು ಪದವಿ ಅಭ್ಯಾಸಕ್ಕಾಗಿ 1888ರಲ್ಲಿ ಲಂಡನ್‌ಗೆ ಪಯಣಿಸಿದರು. 1891ರಲ್ಲಿ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಮರಳಿದರು. ಗೋಖಲೆ ಅವರ ಮಾರ್ಗದರ್ಶನದಲ್ಲಿ 1917ರ ಚಂಪಾರಣ್ಯ ಸತ್ಯಾಗ್ರಹ, 1918ರಲ್ಲಿ ಅಹಮದಾಬಾದ್‌ನ ಗಿರಣಿ ಕಾರ್ಮಿಕರ ಮುಷ್ಕರ, 1919ರ ಖಿಲಾಪತ್, 1922ರ ಅಸಹಕಾರ, 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಮೂಲಕ ಸತ್ಯಾಗ್ರಹಿ ಗಾಂಧಿಯಾಗಿ ಹೊರಹೊಮ್ಮಿದರು ಎಂದರು.

ADVERTISEMENT

ಯಂಗ್ ಇಂಡಿಯಾ, ಹರಿಜನ, ನವಜೀವನ ದಿನಪತ್ರಿಕೆ ಆರಂಭಿಸಿ ಜನತೆಯನ್ನು ರಾಷ್ಟ್ರೀಯ ಚಳವಳಿಗೆ ಕರೆತಂದರು. ಸತ್ಯ, ಅಹಿಂಸೆ, ಉಪವಾಸ, ಹೋರಾಟ ಗಾಂಧೀಜಿ ನಮಗೆ ನೀಡಿರುವ ಬಳುವಳಿಗಳು. ಅವರ ಆತ್ಮಚರಿತ್ರೆ ಓದಿ ತಿಳಿದುಕೊಳ್ಳಬೇಕು. ಅಂಬೇಡ್ಕರ್‌ ಸೇರಿದಂತೆ ಇತರೆ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ 8 ವಿದ್ಯಾರ್ಥಿ ನಿಲಯಗಳಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ
ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.