ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು, ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಕೆರೆ ದಂಡೆ ಮೇಲೆ ಸುಮಾರು ಒಂದು ಕಿ.ಮೀ. ನಡೆದುಕೊಂಡೇ ಹೋಗಿ ಕೆರೆ ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವೀಕ್ಷಿಸಿದರು.
– ಪ್ರಜಾವಾಣಿ ಚಿತ್ರ
ಚನ್ನಪಟ್ಟಣ (ರಾಮನಗರ): ‘ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ ಮುಂದೊಂದು ಕೆರೆಗಳೇ ಇಲ್ಲವಾಗುತ್ತವೆ. ಮೊದಲು ಕೆರೆಗಳ ಪ್ರದೇಶ ಎಷ್ಟಿದೆ ಎಂಬುದನ್ನು ಸರ್ವೆ ಮಾಡಿ, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ’ ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಒತ್ತುವರಿ ಮತ್ತು ನಿರ್ವಹಣೆ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಕುಡ್ಲೂರು, ರಾಮಮ್ಮನಕೆರೆ, ಶೆಟ್ಟಿಹಳ್ಳಿ ಕೆರೆ, ಕುಡಿನೀರುಕಟ್ಟೆ ಕೆರೆ, ಸುಣ್ಣಘಟ್ಟ ಕೆರೆ, ಹೊಡಿಕೆ ಹೊಸಹಳ್ಳಿ ಕೆರೆಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಅವರು, ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮೊದಲಿಗೆ ಕೂಡ್ಲೂರು ಕೆರೆಗೆ ಭೇಟಿ ನೀಡಿದ ಫಣೀಂದ್ರ, ಕೆರೆ ಒತ್ತುವರಿ ಜಾಗ ವೀಕ್ಷಿಸಿದರು. ಕೆರೆಯ ತೂಬು ಮುಚ್ಚಿರುವ ಜಾಗಕ್ಕೆ ಅಧಿಕಾರಿಗಳೊಂದಿಗೆ ಒಂದು ಕಿ.ಮೀ.ಗೂ ಹೆಚ್ಚು ದೂರ ನಡೆದು ವೀಕ್ಷಿಸಿದರು. ಕೆರೆಗಳಿಗೆ ಕೊಳಚೆ ನೀರು ಹರಿದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಲಿನಕ್ಕೆ ಬೇಸರ: ‘ಕೆರೆಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ವಸತಿ ಪ್ರದೇಶಗಳ ಚರಂಡಿ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ನೀರು ಮಲಿನವಾಗಿದೆ. ಹೂಳಿನ ಪ್ರಮಾಣವೂ ಹೆಚ್ಚಾಗಿದೆ. ಇದು ಹೀಗೆಯೇ ಮುಂದುವರಿದರೆ ಕೆರೆ ನೀರು ಬಳಸಲಾಗದ ಸ್ಥಿತಿ ಎದುರಾಗಲಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಅಧಿಕಾರಿಗಳು, ‘ಕೂಡ್ಲೂರು ಕೆರೆಗೆ ಹರಿಯುವ ಕೊಳಚೆ ನೀರನ್ನು ಶುದ್ಧಿಕರಿಸಿ ಮರಳಿ ಕೆರೆಗೆ ಬಿಡುವುದಕ್ಕಾಗಿ ಮಂಡಳಿಯು ಕೆರೆ ಬಳಿ ₹94 ಕೋಟಿ ವೆಚ್ಚದಲ್ಲಿ ವೆಟ್‌ವೆಲ್ ನಿರ್ಮಿಸಲು ಮುಂದಾಗಿದೆ’ ಎಂದರು.
ಕ್ರಮಕ್ಕೆ ಎಷ್ಟು ದಿನ ಬೇಕು?: ಕೆರೆಯ ಒತ್ತುವರಿ ತೆರವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎಷ್ಟು ದಿನಗಳಲ್ಲಿ ಬಗೆಹರಿಸುತ್ತೀರಿ? ಎಂದು ನ್ಯಾ. ಫಣೀಂದ್ರ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಅಧಿಕಾರಿಯೊಬ್ಬರು, ‘ಎರಡು ತಿಂಗಳು ಬೇಕಾಗಬಹುದು’ ಎಂದರು. ಆಗ, ‘ಮೂರು ತಿಂಗಳು ಸಮಯ ತೆಗೆದುಕೊಂಡು ಕೈಗೊಂಡಿರುವ ಕ್ರಮದ ಕುರಿತು ನನಗೆ ವರದಿ ನೀಡಿ. ನಿರ್ಲಕ್ಷ್ಯ ಮಾಡಿದರೆ ಪ್ರಕರಣ ಮುಗಿಸುವುದಿಲ್ಲ’ ಎಂದು ಉಪ ಲೋಕಾಯುಕ್ತ ಎಚ್ಚರಿಕೆ ನೀಡಿದರು.
ದೇಗುಲಕ್ಕೆ ಭೇಟಿ: ಮಾರ್ಗಮಧ್ಯೆ ಪುರಾತನ ಕೂಡ್ಲೂರಿನ ಶ್ರೀರಾಮ ದೇವಸ್ಥಾನಕ್ಕೆ ನ್ಯಾ. ಫಣೀಂದ್ರ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯದ ಕೆಲವೆಡೆ ಶಿಥಿಲವಾಗಿರುವುದನ್ನು ಗಮನಿಸಿದ ಅವರು, ಜೀರ್ಣೋದ್ಧಾರಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಯಾಗಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು. ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವೆ. ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹ, ಉಪವಿಭಾಗಾಧಿಕಾರಿ ಬಿನೋಯ್, ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್. ಗಿರೀಶ್, ತಾಲ್ಲೂಕು ಪಂಚಾಯಿತಿ ಇಒ, ಕೆಯುಡಬ್ಲ್ಯೂಎಸ್‌ಡಿಬಿ ಪವಿತ್ರ, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕೆರೆಗಳ ಸಮಸ್ಯೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನನಗೆ ವರದಿ ನೀಡಬೇಕು. ಸಮಸ್ಯೆ ಇತ್ಯರ್ಥವಾಗುವವರೆಗೆ ನಾನು ಪ್ರಕರಣ ಮುಗಿಸುವುದಿಲ್ಲ– ನ್ಯಾ. ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತ
ಜನರ ಜೀವನಾಡಿಯಾಗಿರುವ ಕೆರೆಗಳನ್ನು ಉಳಿಸಲು ಜಿಲ್ಲಾಧಿಕಾರಿಯೇ ಮುತುವರ್ಜಿ ವಹಿಸಬೇಕು. ನಿಮ್ಮ ನೇತೃತ್ವದಲ್ಲಿ ಕೆರೆ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಸಮಿತಿ ಕೆರೆಗಳ ಮೂಲ ದಾಖಲೆಗಳನ್ನು ಸಂಗ್ರಹಿಸಿ ಮೂಲ ವಿಸ್ತೀರ್ಣವನ್ನು ಪತ್ತೆಹಚ್ಚಬೇಕು. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ಜಾರಿಗೊಳಿಸಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ನ್ಯಾ. ಫಣೀಂದ್ರ ಸೂಚಿಸಿದರು.
ತಾಲ್ಲೂಕಿನ ಕೆರೆಗಳ ಒತ್ತುವರಿ ಕೊಳಚೆ ನೀರು ಹರಿಸುವುದು ದಂಡೆಯಲ್ಲಿ ತ್ಯಾಜ್ಯ ಸುರಿಯುವುದು ಸೇರಿದಂತೆ ಕೆರೆಗಳ ದುಸ್ಥಿತಿ ಕುರಿತು ‘ಪ್ರಜಾವಾಣಿ’ ಸೇರಿದಂತೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿ ಮೇರೆಗೆ ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ‘ಹಿಂದೆ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲೂ ಕೆರೆಗಳ ದುಸ್ಥಿತಿ ಬಗ್ಗೆ ಅಹವಾಲು ಸಲ್ಲಿಕೆಯಾಗಿದ್ದವು. ದಿನಪತ್ರಿಕೆಗಳಲ್ಲೂ ವರದಿಗಳು ಪ್ರಕಟವಾಗಿದ್ದವು. ಕೊಳಚೆ ಕಾರಣಕ್ಕೆ ಕೆಲ ಕೆರೆಗಳಲ್ಲಿ ಮೀನುಗಳು ಸತ್ತಿದ್ದು ಸಹ ಗಮನಕ್ಕೆ ಬಂದಿತ್ತು. ಆ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅವುಗಳನ್ನು ಪರಿಶೀಲಿಸಿ ಕ್ರಮ ವಹಿಸಲು ಇಂದು ಖುದ್ದಾಗಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವೆ’ ಎಂದು ನ್ಯಾ. ಫಣೀಂದ್ರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.