ADVERTISEMENT

ರಾಮನಗರ: ಸಿಬ್ಬಂದಿ ಕೊರತೆ ಸುಳಿಯಲ್ಲಿ ನಗರಸಭೆ

ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಿಲ್ಲ ಅಗತ್ಯ ಸಿಬ್ಬಂದಿ

ಓದೇಶ ಸಕಲೇಶಪುರ
Published 18 ಡಿಸೆಂಬರ್ 2024, 6:35 IST
Last Updated 18 ಡಿಸೆಂಬರ್ 2024, 6:35 IST
ರಾಮನಗರ ನಗರಸಭೆ
ರಾಮನಗರ ನಗರಸಭೆ   

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದ ನಗರಸಭೆಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯು ವರ್ಷದಿಂದ ವರ್ಷಕ್ಕೆ ಬೆಳೆದು, ಜನಸಂಖ್ಯೆಯೂ ಹೆಚ್ಚಾಗಿದೆ. ಆದರೆ, ನಗರದ ನಿರ್ವಹಣೆಯ ಹೊಣೆ ಹೊತ್ತಿರುವ ನಗರಸಭೆಯ ಸಿಬ್ಬಂದಿಯ ಸಂಖ್ಯೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ.

ತ್ಯಾಜ್ಯ ವಿಲೇವಾರಿ ಸಮಸ್ಯೆ, ನೈರ್ಮಲ್ಯದ ಕೊರತೆ, ಹದಗೆಟ್ಟ ರಸ್ತೆಗಳು, ರಸ್ತೆ ಅತಿಕ್ರಮಿಸಿರುವ ಗೂಡಂಗಡಿಗಳು, ಎಗ್ಗಿಲ್ಲದೆ ಬಳಕೆಯಲ್ಲಿರುವ ನಿಷೇಧಿತ ಪ್ಲಾಸ್ಟಿಕ್, ಪಾದಚಾರಿ ಮಾರ್ಗದ ಒತ್ತುವರಿ, ನಿಯಮಬಾಹಿರ ಚಟುವಟಿಕೆಗಳ ವಿರುದ್ಧ ನಡೆಯದ ಕಾರ್ಯಾಚರಣೆ ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಕುರಿತು ನಿತ್ಯ ನಾಗರಿಕರು ನಗರಸಭೆಯ ಕದ ಬಡಿಯುತ್ತಲೇ ಇದ್ದಾರೆ.

ಆದರೆ, ನಾಗರಿಕ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ಒದಗಿಸುವಷ್ಟು ಸಿಬ್ಬಂದಿ ಸಾಮರ್ಥ್ಯ ನಗರಸಭೆಗಿಲ್ಲ. ಬೆಳಿಗ್ಗೆ ಬೀದಿಗಳಲ್ಲಿ ಮತ್ತು ಮನೆಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಂದಿಡಿದು, ಅವರನ್ನು ಮೇಲ್ವಿಚಾರಣೆ ಮಾಡುವವರರು ಸೇರಿದಂತೆ ಅದಕ್ಕೂ ಮೇಲಿನ ಇನ್ನು ಹಲವು ಅಧಿಕಾರಿಗಳ ಕೊರತೆಯ ಸುಳಿಯಲ್ಲಿ ನಗರಸಭೆ ಇದೆ.

ADVERTISEMENT

ಇರುವವರಿಗೇ ಕಾರ್ಯೋತ್ತಡ: ‘ಅರ್ಧದಷ್ಟು ಸಿಬ್ಬಂದಿ ಕೊರತೆಯಿಂದಾಗಿ, ಸದ್ಯ ಇರುವವರ ಮೇಲೆಯೇ ಕಾರ್ಯೋತ್ತಡ ಹೆಚ್ಚಾಗಿದೆ. ಇದರಿಂದಾಗಿ ನಿಗದಿತ ಅವಧಿಯಲ್ಲಿ ಜನರ ಕೆಲಸಗಳು ಆಗುತ್ತಿಲ್ಲ. ಇದರಿಂದ ಸಾರ್ವಜನಿಕರಿಂದ ಆಕ್ರೋಶ ಎದುರಿಸಬೇಕಾಗಿದೆ. ಲಭ್ಯವಿರುವ ಸಿಬ್ಬಂದಿಯೇ ಕಚೇರಿ ಕೆಲಸದ ಜೊತೆಗೆ ಕ್ಷೇತ್ರ ಭೇಟಿ ನೀಡಬೇಕು. ನಿಷೇಧಿತ ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಕಾರ್ಯಾಚರಣೆ ನಡೆಸಬೇಕಿದೆ’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆಗೆ 152 ಕಾಯಂ ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ ಇರುವುದು 104 ಮಾತ್ರ. ಇವರೇ ನಿತ್ಯ ತ್ಯಾಜ್ಯ ಸಂಗ್ರಹ, ಲೋಡಿಂಗ್, ವಿಲೇವಾರಿ, ನಗರದ ಸ್ವಚ್ಛತೆ, ಉದ್ಯಾನ ನಿರ್ವಹಣೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧದ ಕಾರ್ಯಾಚರಣೆಗೂ ಬಳಸಿಕೊಳ್ಳಲಾಗುತ್ತಿದೆ. ನಗರದ ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಳವಾಗಬೇಕು. ಆಗ ನಗರದ ನೈರ್ಮಲ್ಯ  ಆದರೆ, ಮಂಜೂರಾದ ಹುದ್ದೆಗಳಿಗಿಂತಲೂ ಕಡಿಮೆ ಇದ್ದಾರೆ’ ಎಂದರು.

ಡಾ. ಜಯಣ್ಣ ಪೌರಾಯುಕ್ತ ರಾಮನಗರ

ಅರ್ಧದಷ್ಟು ಸಿಬ್ಬಂದಿ ಕೊರತೆ!

ಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡಂತೆ ಒಟ್ಟು 236 ಹುದ್ದೆಗಳು ಮಂಜೂರಾಗಿವೆ. ಆ ಪೈಕಿ ಭರ್ತಿಯಾಗಿರುವುದು 118 ಮಾತ್ರ. ಅರ್ಧದಷ್ಟು ಸಿಬ್ಬಂದಿ ಕೊರತೆ ಇದೆ. ಅದರಲ್ಲೂ ಮುಖ್ಯವಾಗಿ ಲೆಕ್ಕಾಧಿಕಾರಿ ಕಂದಾಯ ನಿರೀಕ್ಷಕರು ಕಿರಿಯ ಆರೋಗ್ಯ ನಿರೀಕ್ಷಕರು ನೀರು ಸರಬರಾಜುದಾರರು ಸಹಾಯಕ ನೀರು ಸರಬರಾಜುದಾರರು ಹಾಗೂ ಪೌರ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿದೆ.

ಕೊರತೆಯಲ್ಲೂ ನಿಭಾಯಿಸುವ ಸವಾಲು

‘ನಗರಸಭೆಯ ವಿವಿಧ ವಿಭಾಗಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಯಾವೂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ರಾಮನಗರದಲ್ಲಷ್ಟೇ ಅಲ್ಲದೆ ಎಲ್ಲಾ ಕಡೆಯೂ ಇದೇ ರೀತಿಯ ಸ್ಥಿತಿ ಇದೆ. ಕೊರತೆಯ ನಡುವೆಯೇ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಾದ ಸವಾಲು ನಮ್ಮ ಮುಂದಿದೆ. ಕೆಲ ವಿಭಾಗಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಂಡು ಸರಿದೂಗಿಸಲಾಗುತ್ತಿದೆ. ಇದೇ ಕಾರಣಕ್ಕೆ ಘನ ತ್ಯಾಜ್ಯ ನಿರ್ವಹಣೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ದಾಳಿ ಸೇರಿದಂತೆ ಕೆಲ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇರುವ ಸಿಬ್ಬಂದಿಯೇ ಕಚೇರಿ ಕೆಲಸದ ಜೊತೆಗೆ ಕ್ಷೇತ್ರ ಭೇಟಿ ಕೂಡ ಮಾಡಬೇಕಿದೆ’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.