ADVERTISEMENT

90 ದಿನದಲ್ಲಿ ರಾಜಿ ಪ್ರಕರಣ ವಿಲೇವಾರಿ: ಸವಿತ ಪಿ.ಆರ್

ಅ.7ರವರೆಗೆ ವಿಲೇವಾರಿ: ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:49 IST
Last Updated 2 ಜುಲೈ 2025, 15:49 IST
ಸವಿತ ಪಿ.ಆರ್, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 
ಸವಿತ ಪಿ.ಆರ್, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ    

ರಾಮನಗರ: ‘ಸುಪ್ರೀಂ ಕೋರ್ಟ್ ಆದೇಶದಂತೆ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಅ. 7ರವರೆಗೆ 90 ದಿನದೊಳಗೆ ವಿಲೇವಾರಿ ಮಾಡಲಾಗುವುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಹೇಳಿದರು.

ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈವಾಹಿಕ ಜೀವನ, ಅಪಘಾತ, ಕೌಟುಂಬಿಕ ದೌರ್ಜನ್ಯ, ಭೂ ಸ್ವಾಧೀನ, ಸಿವಿಲ್ ಪ್ರಕರಣ ಸೇರಿದಂತೆ ರಾಜಿಯಾಗಬಲ್ಲ ಪ್ರಕರಣಗಳನ್ನು ನುರಿತ ವಕೀಲರ ಮುಖಾಂತರ ಮಧ್ಯಸ್ಥಿಕೆ ವಹಿಸಲಾಗುವುದು. ಸಂಧಾನದ ಮೂಲಕ ಒಪ್ಪಂದ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿ ವಿಲೇವಾರಿ ಮಾಡಲಾಗುವುದು’ ಎಂದರು.

‘ವಾರದ ಏಳು ದಿನಗಳಲ್ಲಿಯೂ ಈ ಪ್ರಕ್ರಿಯೆ ನಡೆಯುತ್ತದೆ. ಕೆಲವರಿಗೆ ಸೋಮವಾರದಿಂದ ಶನಿವಾರದವರೆಗೆ ಕೆಲಸಗಳು ಇರುತ್ತದೆ. ಆದ್ದರಿಂದ ಅವರಿಗೆ ಅನುಕೂಲವಾಗಲೆಂದು ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲೂ ಈ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಿರ್ಗತಿಕರಿಗೆ ಆಧಾರ್ ಕಾರ್ಡ್ ಒದಗಿಸುವುದಕ್ಕಾಗಿ ಪ್ರಾಧಿಕಾರ ಸಾಥಿ ಕಾರ್ಯಕ್ರಮ ಜಾರಿಗೆ ತಂದಿದೆ. ಅದಕ್ಕಾಗಿ, ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರೊಂದಿಗೆ ಆಧಾರ್ ಶಿಬಿರಗಳನ್ನು ಆಯೋಜಿಸಿ ನಿರ್ಗತಿಕ ಮಕ್ಕಳಿಗೆ ಹಾಗೂ ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳಿಗೂ ಸಹ ಆಧಾರ್ ಕಾರ್ಡ್ ವಿತರಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ವಂಚಿತ ಮಕ್ಕಳಿರಿರಬಾರದು. ಆಧಾರ್ ಕಾರ್ಡ್ ಇದ್ದರೆ ಸರ್ಕಾರದಿಂದ ದೊರಕುವ ಸೌಲಭ್ಯಗಳು, ಸ್ಕಾಲರ್‌ಶಿಪ್ ಹಾಗೂ ಇತರ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಕಾರವಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಆಧಾರ್ ಕಾರ್ಡ್ ವಂಚಿತ ಮಕ್ಕಳಿಗೆ ಸರ್ಕಾರದ ಸವಲತ್ತುಗಳು ದೊರಕುವುದಿಲ್ಲ ಇದೇ ಕಾರಣಕ್ಕೆ ಬಾಲ ಕಾರ್ಮಿಕರಾಗುತ್ತಾರೆ. ಬಡ ಮಕ್ಕಳಿಗೆ ಶಿಕ್ಷಣ ಪಡೆಯಲು ಹಣದ ಸಮಸ್ಯೆ ಇರುತ್ತದೆ. ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ಕಾರ್ಡ್ ಒದಗಿಸುವ ಜವಾಬ್ದಾರಿ ಕಾನೂನು ಸೇವೆಗಳ ಪ್ರಾಧಿಕಾರದ್ದಾಗಿರುತ್ತದೆ’ ಎಂದು ಹೇಳಿದರು.

‘ಆದ್ದರಿಂದ ನಿರ್ಗತಿಕ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ಒದಗಿಸಲಾಗುತ್ತದೆ. ಅಂತಹ ಮಕ್ಕಳು ಕಂಡುಬಂದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಹಾಯವಾಣಿ: 15100ಗೆ ಕರೆ ಮಾಡಬಹುದು. ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ಅಗತ್ಯ ನೆರವು ಪಡೆಯಬೇಕು’ ಎಂದು ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ‘ಸಾಥಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಪೋಷಕರು ಮತ್ತು ಪಾಲಕರಿಲ್ಲದ ನಿರ್ಗತಿಕ ಮಕ್ಕಳಿಗೆ ಆಧಾರ್ ಕಾರ್ಡ್ ವಿತರಿಸುವುದು ಈ ಕಾರ್ಯಕ್ರಮದ ಉದ್ದೇಶ
ಸವಿತ ಪಿ.ಆರ್, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.