ರಾಮನಗರ: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಯಾದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸದ್ದಿಲ್ಲದೆ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿಗೆ ಕೂಗಳತೆ ದೂರದಲ್ಲಿ ಬೆಂಗಳೂರು–ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಮಾರುತಿ ನಗರದ ಜಾಗದಲ್ಲಿ ಭವನ ತಲೆ ಎತ್ತುತ್ತಿದೆ.
ಇದುವರೆಗೆ ನಗರದ ವಿವಿಧ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಚೇರಿಗೆ ಕಡೆಗೂ ಶಾಶ್ವತ ಕಟ್ಟಡದ ಭಾಗ್ಯದ ದಿನಗಳು ಸಮೀಪಿಸಿವೆ. ಹತ್ತು ಸಾವಿರ ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಜಿ+3 ಭವನದ ಅಡಿಪಾಯದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಪಿಲ್ಲರ್‌ಗಳ ನಿರ್ಮಾಣ ನಡೆಯುತ್ತಿದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಭವನದ ಉಸ್ತುವಾರಿ ಹೊತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
₹7 ಕೋಟಿ ವೆಚ್ಚ: ‘ಎರಡು ವರ್ಷದ ಹಿಂದೆಯೇ ಪಕ್ಷದ ವತಿಯಿಂದ ಖರೀದಿಸಿದ್ದ ಜಾಗದ ನೋಂದಣಿ ವಿವಿಧ ಕಾರಣಗಳಿಗಾಗಿ ವಿಳಂಬವಾಗಿತ್ತು. ಇದೀಗ, ಜಿಲ್ಲಾ ಕಾಂಗ್ರೆಸ್ ಹೆಸರಿಗೆ ಜಾಗದ ನೋಂದಣಿಯಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸುಮಾರು ₹7 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯ ಶುರುವಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭವನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲೇ ಭಾನುವಾರ ನಡೆಯಲಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿರುವ ಡಿಸಿಎಂ ಭವನಕ್ಕೆ ಸಾಂಕೇತಿಕವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಕ್ಷದ ನಾಯಕರು, ಮುಖಂಡರು ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ದೇಣಿಗೆಯಿಂದ ಭವನ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಭವನದಲ್ಲಿ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಯುವ ಕಾಂಗ್ರೆಸ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ವಿಭಾಗಗಳ ಕಚೇರಿಗಳು, ಪಕ್ಷದ ಸಭೆ–ಸಮಾರಂಭಗಳಿಗಾಗಿ ಸಭಾಂಗಣ, ಕಚೇರಿಗೆ ಭೇಟಿ ನೀಡುವ ನಾಯಕರು ಮತ್ತು ಮುಖಂಡರಿಗೆ ವಿಶ್ರಾಂತಿ, ವಾಸ್ತವ್ಯಕ್ಕೆ ಕೊಠಡಿ ಸಹ ಇರಲಿವೆ. ವಾಹನಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ. ತಳಮಹಡಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡುವ ಯೋಚನೆ ಇದೆ’ ಎಂದು ಮಾಹಿತಿ ನೀಡಿದರು.
2007ರಲ್ಲಿ ರಾಮನಗರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡಿತು. ಅಂದಿನಿಂದಲೂ ಪಕ್ಷಕ್ಕೆ ಸ್ವಂತ ಕಚೇರಿ ಇರಲಿಲ್ಲ. ಬಾಡಿಗೆ ಕಟ್ಟಡದಲ್ಲಿದ್ದ ಕಚೇರಿ ವಿವಿಧ ಕಾರಣಗಳಿಗಾಗಿ ಆಗಾಗ ಸ್ಥಳಾಂತರಗೊಳ್ಳುತ್ತಲೇ ಇತ್ತು. ಮೊದಲು ಗುಂಡಪ್ಪ ಬಿಲ್ಡಿಂಗ್, ಹಳೆ ಆರ್‌ಟಿಒ ಕಚೇರಿ ಪಕ್ಕಲ್ಲಿದ್ದ ಪಕ್ಷದ ಕಚೇರಿ, ನಂತರ ಮಿನಿ ವಿಧಾನಸೌಧದ ಎದುರಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಮಾರ್ಗದರ್ಶನದಂತೆ ಜಿಲ್ಲಾ ಕೇಂದ್ರದಲ್ಲಿ ಸುಮಾರು ₹7 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿದೆ –ಗಂಗಾಧರ್ ಜಿಲ್ಲಾಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಮನಗರ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.