ADVERTISEMENT

ಬಿಡದಿ ಜನಸ್ಪಂದನ: ಕೈ, ಜೆಡಿಎಸ್‌ ಮುಖಂಡರ ಮಾತಿನ ಚಕಮಕಿ

ಬಿಡದಿಯ ಜನಸ್ಪಂದನ ಸಭೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:54 IST
Last Updated 3 ಜುಲೈ 2022, 2:54 IST
ಜನಸ್ಪಂದನ ಕಾರ್ಯಕ್ರಮ
ಜನಸ್ಪಂದನ ಕಾರ್ಯಕ್ರಮ   

ಬಿಡದಿ: ಜೆಡಿಎಸ್‌ ಶಾಸಕ ಎ.ಮಂಜುನಾಥ್ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋದ ಘಟನೆ ಶನಿವಾರ ರೇಷ್ಮೆ ಫಾರಂ ಹೌಸ್ ಬಳಿ ನಡೆಯಿತು.

ಪಟ್ಟಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆದಿದ್ದ ಜನಸ್ಪಂದನ ಸಭೆಯು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿಗೆ ವೇದಿಕೆಯಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ನೇತೃತ್ವದಲ್ಲಿ ಪುರಸಭೆಯ ಕಾಂಗ್ರೆಸ್‌ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಜನಸ್ಪಂದನ ಸಭೆಗೆ ಆಗಮಿಸಿ ವೇದಿಕೆ ಮುಂಭಾಗ ಕುಳಿತಿದ್ದರು.

ADVERTISEMENT

ಈ ವೇಳೆ ವೇದಿಕೆಗೆ ಆಗಮಿಸಿದ ಮಂಜುನಾಥ್‌ ಅವರು ಸಿ.ಎಂ. ಲಿಂಗಪ್ಪ ಅವರನ್ನು ವೇದಿಕೆ ಕರೆದರು. ಇದಕ್ಕೆ ಪ್ರತಿಕ್ರಿಯಿಸಿದ ಲಿಂಗಪ್ಪ, ‘ನನ್ನನ್ನು ಕಾಟಾಚಾರಕ್ಕೆ ಆಹ್ವಾನಿಸಲಾಗಿದೆ’ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಗಾಣಕಲ್ ನಟರಾಜ್ ಪುರಸಭೆಗೆ ಬಂದಿರುವ ಅನುದಾನವನ್ನು ಶಾಸಕರು ಕಾಂಗ್ರೆಸ್ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ದೂರಿದರು. ಇದಕ್ಕೆ ಜೆಡಿಎಸ್‌ ಸದಸ್ಯರು ಆಕ್ಷೇಪಿಸಿದರು. ಇದರೊಂದಿಗೆ ಮಾತಿನ ಚಕಮಕಿ ಆರಂಭವಾಗಿ, ಎರಡು ಪಕ್ಷದ ಮುಖಂಡರ ನಡುವೆ ಪರಸ್ಪರ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಪಕ್ಷದ ಮುಖಂಡರನ್ನು ಸಮಾಧಾನಪಡಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಅಮರ್ ನಾಥ್ ಅವರನ್ನು ತರಾಟೆಗೆ ತಗೆದುಕೊಂಡ ಲಿಂಗಪ್ಪ, ‘ಸಭೆ ನಡೆಯುವ ಕೆಲ ಸಮಯದ ಹಿಂದೆ ಆಹ್ವಾನ ಪ್ರತಿ ಕಳುಹಿಸುತ್ತೀಯಾ, ನಾನು ಒಬ್ಬ ಶಾಸಕ ಎಂದು ಪರಿಗಣಿಸಬೇಕು. ಇದನ್ನು ನೀನು ಲೆಕ್ಕಿಸದೆ ಕಾಟಾಚಾರಕ್ಕೆ ಆಹ್ವಾನ ಕಳುಹಿಸಿದಂತೆ ಕಾಣುತ್ತದೆ’ ಎಂದು ರೇಗಿ ವೇದಿಕೆಯಿಂದ ಕೆಳಗಿಳಿದರು.

‘ಅನುದಾನ ಹಂಚಿಕೆಯಲ್ಲಿ ನನಗೂ ಅಧಿಕಾರ ಇದೆ ಎಂದು ಶಾಸಕರು ಹಾಗೂ ಅಧಿಕಾರಿಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಿಷ್ಟಾಚಾರ ಪಾಲನೆಯಲ್ಲಿ ನನಗೆ ಹಲವು ಬಾರಿ ಅಪಮಾನ ಮಾಡಲಾಗಿದೆ. ಇನ್ಮುಂದೆ ಸಹಿಸಲು ಸಾಧ್ಯವಿಲ್ಲ’ ಕಿಡಿಕಾರಿದರು.

ಬಳಿಕ ಮಾತನಾಡಿದ ಮಂಜುನಾಥ್‌, ‘ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಇನ್ನೂ ಪ್ರಕಟಗೊಂಡಿಲ್ಲ. ಹೀಗಾಗಿ ಪುರಸಭೆಯ ಆಡಳಿತ ನನ್ನ ಕೈಯಲ್ಲಿದೆ. ಯಾವುದೇ ಅನುದಾನ ಬಂದರು ಅದನ್ನುಉಪಯೋಗಿಸುವ ವಿವೇಚನೆ ನನಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.