ADVERTISEMENT

ರಾಮನಗರ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ನೀತಿಗೆ ಕಾಂಗ್ರೆಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 15:21 IST
Last Updated 20 ಆಗಸ್ಟ್ 2020, 15:21 IST
ಸಂಸದ ಡಿ.ಕೆ. ಸುರೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಸಂಸದ ಡಿ.ಕೆ. ಸುರೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ರಾಮನಗರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯ, ಕಾರ್ಮಿಕ ವಿರೋಧಿ ನೀತಿ, ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿ ವೈಫಲ್ಯ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಮೊದಲಿಗೆ ದಿ. ರಾಜೀವ್ ಗಾಂಧಿ ಮತ್ತು ದಿ.ದೇವರಾಜ ಅರಸು ಜನ್ಮದಿನವನ್ನು ಆಚರಿಸಿದರು. ಜನಧ್ವನಿ ಘೋಷಣೆಯಡಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ಭೂ ಸುಧಾರಣಾ ಕಾಯ್ದೆ - 1961ಕ್ಕೆ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಕಾಯ್ದೆಯ ಆತ್ಮದಂತಿದ್ದ ಸೆಕ್ಷನ್‌ 64, 79 -ಎ, 29(ಬಿ), 79(ಸಿ) ಮತ್ತು 80 ಅನ್ನು ನಿಷ್ಕ್ರಿಯಗೊಳಿಸಿದೆ. ಈ ತಿದ್ದುಪಡಿಯಿಂದ ರಾಜ್ಯದಲ್ಲಿ ಕೃಷಿಕರಲ್ಲದ ದೊಡ್ಡ ದೊಡ್ಡ ಕಂಪನಿಗಳಿಗೆ ಮತ್ತು ಕೋಟ್ಯಂತರ ರೂಪಾಯಿ ಕೃಷಿಯೇತರ ಆದಾಯವುಳ್ಳ ಶ್ರೀಮಂತರಿಗೆ, ದುರ್ಬಲ ವರ್ಗದ ರೈತರ ಕೃಷಿ ಭೂಮಿಯನ್ನು ಖರೀದಿಸುವ ಅವಕಾಶ ನೀಡಲಾಗುತ್ತಿದೆ ಎಂದು ದೂರಿದರು.

ADVERTISEMENT

ರಾಜ್ಯ ಸರ್ಕಾರ ಅತಿವೃಷ್ಟಿ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಕಳೆದ ವರ್ಷ ಘೋಷಿಸಿದ ಪರಿಹಾರದ ಮೊತ್ತವೆಷ್ಟು? ಎಷ್ಟು ಜನರಿಗೆ ವಿತರಿಸಲಾಗಿದೆ? ಬಿದ್ದು ಹೋದ ಎಷ್ಟು ಮನೆಗಳನ್ನು ಕಟ್ಟಲಾಗಿದೆ? ಎಷ್ಟು ಕೃಷಿಕರಿಗೆ ಪರಿಹಾರ ನೀಡಲಾಗಿದೆ ಎಂಬುದರ ಲೆಕ್ಕ ನೀಡುವಂತೆ ಒತ್ತಾಯಿಸಿದರು.

ಇದುವರೆಗೆ ಜಾರಿಯಲ್ಲಿದ್ದ ಕೈಗಾರಿಕಾ ವಿವಾದಗಳ ಕಾಯ್ದೆ ಅಡಿಯಲ್ಲಿ 300ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಯಾವುದೇ ಕೈಗಾರಿಕೆ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸುವ ಮುನ್ನ ಸರ್ಕಾರದ ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಬಿಜೆಪಿ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಆ ಸಂಖ್ಯೆಯನ್ನು 100ಕ್ಕೆ ಇಳಿಸಿದೆ. ಇದರಿಂದಾಗಿ ಕಾರ್ಮಿಕರಿಗೆ ಅತಂತ್ರ ಮತ್ತು ಅಭದ್ರತೆಯ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ಗಂಗಾಧರ್‌, ಕಾಂಗ್ರೆಸ್‌ ಮುಖಂಡರಾದ ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಹುಸೇನ್ , ಕೆ. ರಮೇಶ್ , ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಯ್ಯ, ಡಿ.ಎಂ.ಮಹದೇವಯ್ಯ, ಗಾಣಕಲ್ ನಟರಾಜು, ಕಾಂತರಾಜಪೇಟಲ್ ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ಮುಖಂಡರಾದ ಸಿಎನ್ ಆರ್ ವೆಂಕಟೇಶ್, ಬಸವನಪುರ ನರಸಿಂಹಮೂರ್ತಿ, ಚೇತನ್ ಕುಮಾರ್, ಶಿವಕುಮಾರ್ ಸ್ವಾಮಿ, ನಿಜಾಮುದ್ದೀನ್ ಷರೀಫ್‌ ಸಮದ್‌ ಇದ್ದರು.

ಸಂಸದ ಸುರೇಶ್‌ ವಾಗ್ದಾಳಿ

'ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ವಿರೋಧ ಪಕ್ಷಗಳು ಸಜ್ಜಾಗಿವೆ. ಅಧಿವೇಶನ ಕರೆಯಲೆಂದು ಕಾಯುತ್ತಿದ್ದೇವೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು 'ರಾಜ್ಯ ಸರ್ಕಾರದಲ್ಲಿನ ಸಚಿವರು ಎಲ್ಲಿ ದುಡ್ಡು ಸಿಗುತ್ತೋ ಎಂದು ಕಾಲ ಕಳೆಯುತ್ತಿದ್ದಾರೆ. ಜನಪರವಾಗಿ ಕೆಲಸ ಮಾಡುವವರು ಇಲ್ಲ. ಇವರನ್ನು ಇವರನ್ನ ನಂಬಿದರೆ ಪ್ರವಾಹದಲ್ಲಿ ಕೊಚ್ಚಿ ಹೋದವರಿಗೂ, ಕೊರೊನಾದಿಂದ ಸತ್ತವರ ಕುಟುಂಬಕ್ಕೂ ನಾಮವೇ ಗತಿ’ ಎಂದು ವಾಗ್ದಾಳಿ ನಡೆಸಿದರು.

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ, ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಯಾವುದೇ ಸಂಘಟನೆ ತಪ್ಪು ಮಾಡಿದ್ದರೇ ಕಾನೂನು ಕ್ರಮ ಕೈಗೊಳ್ಳಲಿ. ಪ್ರಕರಣದ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.