ADVERTISEMENT

ಯೋಗೇಶ್ವರ್‌ಗೆ ಕಾಂಗ್ರೆಸ್ ಗಾಳ?

ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಿಪಿವೈ; ಗುಪ್ತ ಮಾತುಕತೆಯ ವದಂತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 6:27 IST
Last Updated 4 ನವೆಂಬರ್ 2021, 6:27 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬೆನ್ನಲ್ಲೇ ಅವರನ್ನು ಮತ್ತೆ ಕಾಂಗ್ರೆಸ್‌ನತ್ತ ಸೆಳೆಯಲು ಕೈ ನಾಯಕರು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಸಚಿವ ಸ್ಥಾನ ವಂಚಿತರಾಗಿರುವ ಯೋಗೇಶ್ವರ್‌ ಅದಕ್ಕಾಗಿ ಪ್ರಯತ್ನ ಮುಂದುವರಿಸುತ್ತಲೇ ಇದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್‌ ನಾಯಕರ ಜೊತೆ ಸಂಪರ್ಕ ಬೆಳೆಸುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ. ಸಿಪಿವೈ–ಡಿ.ಕೆ. ಸುರೇಶ್‌ ನಡುವೆ ಮಾತುಕತೆಯೂ ನಡೆದಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈ ಇಬ್ಬರು ನಾಯಕರು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಡಿಕೆಶಿ ತಂತ್ರ: ವರ್ಷಗಳ ಹಿಂದಷ್ಟೇ ‘ದೋಸ್ತಿ’ ಆಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಕ್ಷೇತ್ರದಲ್ಲೇ ಕಟ್ಟಿಹಾಕಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯೋಜಿಸಿದ್ದಾರೆ. ಅದಕ್ಕಾಗಿ ತಮ್ಮ ರಾಜಕೀಯ ವೈರಿ ಯೋಗೇಶ್ವರ್‌ರನ್ನು ಮತ್ತೆ ಕಾಂಗ್ರೆಸ್‌ಗೆ ತರುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ADVERTISEMENT

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕರು ಇಲ್ಲ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ–ಯೋಗೇಶ್ವರ್‌ ನಡುವೆ ಯಾರನ್ನೇ ಅಭ್ಯರ್ಥಿಯನ್ನಾಗಿ ಹಾಕಿದರೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಬಹುದು. ಹೀಗಾಗಿ ಯೋಗೇಶ್ವರ್‌ನ ಮುಂದಿನ ನಡೆ ಗಮನಿಸಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ತೆರೆಮರೆಯ ಸಿದ್ಧತೆ ನಡೆಸಿದ್ದಾರೆ.

ದೀಪಾವಳಿ ಬಳಿಕ ಕಾಂಗ್ರೆಸ್‌ನ ಸ್ಥಳೀಯ ನಾಯಕರ ಗುಂಪು ಚನ್ನಪಟ್ಟಣದಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರ ಅಭಿಪ್ರಾಯ ಪಡೆಯಲಿದೆ. ನಂತರ ಈ ಕುರಿತು ಕೆಪಿಸಿಸಿಗೆ ವರದಿ ಸಲ್ಲಿಸಲಿದೆ. ಆ ವರದಿ ಆಧರಿಸಿ ಶಿವಕುಮಾರ್ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ನ ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಇತ್ತ ಯೋಗೇಶ್ವರ್ ಸಹ ಇದೇ ಆಲೋಚನೆಯಲ್ಲಿದ್ದಾರೆ. ಒಂದೊಮ್ಮೆ ಆಹ್ವಾನ ಬಂದರೆ ಷರತ್ತುಗಳೊಂದಿಗೆ ಕಾಂಗ್ರೆಸ್‌ ಸೇರ್ಪಡೆ ಆಗುವ ಸಾಧ್ಯತೆ ತಳ್ಳಿಹಾಕುವಂತೆ ಇಲ್ಲ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.