ADVERTISEMENT

ರಾಮನಗರ: ‘ಕೈ’ ತೆಕ್ಕೆಗೆ ಕ್ಯಾಸಾಪುರ ಕೃಷಿ ಸಹಕಾರ ಸಂಘ

ಪಾದರಹಳ್ಳಿಯಲ್ಲಿ ಗೋದಾಮು ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 2:32 IST
Last Updated 29 ಅಕ್ಟೋಬರ್ 2025, 2:32 IST
ರಾಮನಗರ ತಾಲ್ಲೂಕಿನ ಕ್ಯಾಸಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು ಸನ್ಮಾನಿಸಿದರು. ಮುಖಂಡರಾದ ಜಗದೀಶ್, ನಾಗೇಶ್ ಆನಮಾನಹಳ್ಳಿ ಹಾಗೂ ಇತರರು ಇದ್ದಾರೆ
ರಾಮನಗರ ತಾಲ್ಲೂಕಿನ ಕ್ಯಾಸಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು ಸನ್ಮಾನಿಸಿದರು. ಮುಖಂಡರಾದ ಜಗದೀಶ್, ನಾಗೇಶ್ ಆನಮಾನಹಳ್ಳಿ ಹಾಗೂ ಇತರರು ಇದ್ದಾರೆ   

ರಾಮನಗರ: ತಾಲ್ಲೂಕಿನ ಕ್ಯಾಸಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 12 ಸದಸ್ಯರ ಪೈಕಿ 8 ಕಾಂಗ್ರೆಸ್ ಬೆಂಬಲಿತರು ಹಾಗೂ 4 ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದು, ಸಂಘದ ಚುಕ್ಕಾಣಿ ‘ಕೈ’ ಪಾಲಾಗಿದೆ.

‘ಪ್ರತಿ ಬಾರಿಯೂ ಸಂಘಕ್ಕೆ ಅವಿರೋಧ ಆಯ್ಕೆಯೇ ನಡೆಯುತ್ತಿತ್ತು. ಈ ಸಲವೂ ಆ ನಿಟ್ಟಿನಲ್ಲಿ ನಡೆದ ಮಾತುಕತೆ ಫಲಪ್ರದವಾಗದಿದ್ದರಿಂದ ಚುನಾವಣೆ ನಡೆಯಿತು. ಅಂತಿಮವಾಗಿ 8 ಕಾಂಗ್ರೆಸ್ ಬೆಂಬಲಿತರು ಗೆದ್ದರು. ಇತರ ಅಭ್ಯರ್ಥಿಗಳು ಕೂದಲೆಳೆ ಅಂತರದಲ್ಲಿ ಸೋತಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪ್ರಕ್ರಿಯೆ ಶೀಘ್ರ ನಡೆಯಲಿದೆ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಸಿಸಿ ಬೆಳೆ ಸಾಲ, ಚಿನ್ನ, ಎಸ್‌ಎಚ್‌ಇ ಸಾಲದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಸಂಘದ ಹಳೆಯ ಕಟ್ಟಡವನ್ನು ಕೆಡವಿ ₹80 ಲಕ್ಷದಲ್ಲಿ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

ಗೋದಾಮು ನಿರ್ಮಾಣ: ‘ಶಾಸಕರಾದ ಬಾಲಕೃಷ್ಣ ಮತ್ತು ಎಚ್.ಎ. ಇಕ್ಬಾಲ್ ಹುಸೇನ್ ಅವರ ಸಹಕಾರದಿಂದ ತಾಲ್ಲೂಕಿನ ಪಾದರಹಳ್ಳಿಯಲ್ಲಿ ಸುಮಾರು ₹6 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಇದರಿಂದಾಗಿ ನಮ್ಮ ಭಾಗದ ಸಂಘಗಳಿಗೆ ರಸಗೊಬ್ಬರ ಕೊರತೆಯಾಗುವುದಿಲ್ಲ’ ಎಂದು ತಿಳಿಸಿದರು.

‘ಗೋದಾಮಿಗೆ ಜಾಗ ಮಂಜೂರು ಮತ್ತು ಅನುದಾನ ಬಿಡುಗಡೆ ಮಾಡಿಸುವಲ್ಲಿ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಹಾಲಿ ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ ತಮ್ಮಾಜಿ ಅವರ ಪಾತ್ರ ದೊಡ್ಡದು. ಗೋದಾಮು ನಿರ್ಮಾಣವಾದರೆ ನಾವು ಬೇರೆ ನಗರಗಳಿಗೆ ಹೋಗಿ ಗೊಬ್ಬರ ತರುವುದು ತಪ್ಪಲಿದೆ. ಸ್ಥಳೀಯ ಸಂಘಗಳಿಗೆ ಸಕಾಲಕ್ಕೆ ಗೊಬ್ಬರ ಸಿಗಲಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಆನಮಾನಹಳ್ಳಿ, ಡಣನಾಯ್ಕನಹಳ್ಳಿ ಮೂರ್ತಿ, ಕ್ಯಾಸಾಪುರ ನಂದೀಶ್ ಸೇರಿದಂತೆ ಸೊಸೈಟಿ ನೂತನ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಇದ್ದರು.

ಸಂಘದ ನೂತನ ನಿರ್ದೇಶಕರು

ಸಾಲಗಾರರ ಸಾಮಾನ್ಯ ಸಾಲದ ಅಭ್ಯರ್ಥಿಗಳಾಗಿ ಶ್ರೀಧರ್(ಕ್ಯಾಸಾಪುರ) ಕೆ.ಎನ್. ನರಸಿಂಹಮೂರ್ತಿ ಲಿಂಗೇಗೌಡ(ಡಣಾಯ್ಕನಪುರ) ಡಿ.ಪಿ. ಚಂದ್ರಶೇಖರ್ (ಶ್ಯಾನುಭೋಗನಹಳ್ಳಿ) ಲೋಕೇಶ್ (ಹಿಪ್ಪೆಮರದದೊಡ್ಡಿ) ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಪೆದ್ದಣ್ಣ (ವಡ್ಡರದೊಡ್ಡಿ) ಜಯಮ್ಮ (ಶ್ಯಾನುಬೋಗನಹಳ್ಳಿ) ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ವಿನೋದ ಕೆ. ಪಟೇಲ್(ಶ್ಯಾನುಬೋಗನಹಳ್ಳಿ) ನಾಗಮಣಿ (ಹಿಪ್ಪೇಮರದದೊಡ್ಡಿ) ಸಾಲಗಾರರ ಹಿಂದುಳಿದ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಶಕುಂತಲ ನಾಗರಾಜು(ಶ್ಯಾನುಭೋಗನಹಳ್ಳಿ) ಸಾಲಗಾರರಲ್ಲದ ಕ್ಷೇತ್ರದಿಂದ ಎಚ್.ಎಂ. ಕೃಷ್ಣೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.