ADVERTISEMENT

ಆಮ್ಲಜನಕ ಸಾಂದ್ರಕ ಕೊಡುಗೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 3:36 IST
Last Updated 1 ಜೂನ್ 2021, 3:36 IST
ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ ಹತ್ತು ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ಕೊಡುಗೆ ನೀಡಿದರು
ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ ಹತ್ತು ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ಕೊಡುಗೆ ನೀಡಿದರು   

ಚನ್ನಪಟ್ಟಣ: ಕೋವಿಡ್ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚನ್ನಪಟ್ಟಣ ಕೋವಿಡ್ ಸೆಂಟರ್‌ಗಳಿಗೆ 10 ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ಕೊಡುಗೆ ನೀಡುತ್ತಿರುವುದಾಗಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಚನ್ನಪಟ್ಟಣ ತಾಲೂಕಿನ ಐದು ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ಕೊಟ್ಟು ಅಲ್ಲಿನ ನಿವಾಸಿಗಳ ಆರೋಗ್ಯ ವಿಚಾರಣೆ ಮಾಡಿ, ಪಟ್ಟಣದ ಮಹದೇಶ್ವರನಗರದ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಚನ್ನಪಟ್ಟಣ ತಾಲ್ಲೂಕಿನ ಐದು ಕೋವಿಡ್ ಸೆಂಟರ್‌ಗಳು ಇವುಗಳನ್ನು ಉಪಯೋಗಿಸಿಕೊಳ್ಳಬಹುದು. ಜಿಲ್ಲೆಯಾದ್ಯಂತ ಇರುವ ಕೋವಿಡ್ ಸೆಂಟರ್ ಗಳಿಗೂ ಮುಂದಿನ ದಿನಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆ ನೀಡಲಾಗುವುದು ಎಂದರು.

ADVERTISEMENT

‘ನನ್ನ ಲೋಕಸಭಾ ಕ್ಷೇತ್ರದ ಎಲ್ಲ ಕೋವಿಡ್ ಕೇರ್ ಸೆಂಟರ್‌ಗಳಿಗೂ ಭೇಟಿ ಕೊಡುತ್ತಿದ್ದೇನೆ. ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಜನರು ಕೊರೊನಾವನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇದ್ದರೆ ಕೊರೊನಾವನ್ನು ಅರ್ಧ ಗೆದ್ದಂತೆ. ಕೊರೊನಾ ಪೀಡಿತರರಿಗೆ ಹಾಗೂ ಕೊರೊನಾ ಸೆಂಟರ್‌ಗಳಿಗೆ ನಮ್ಮಿಂದ ಯಾವುದೇ ಸಹಾಯ ಬೇಕಾದರೂ ನಾವು ಮಾಡಲು ಸಿದ್ಧ’ ಎಂದರು.

‘ಜಿಲ್ಲೆಯಲ್ಲಿ 18 ಕಡೆ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದೇವೆ. ಅಲ್ಲಿಗೆ ಬರುವ ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಇಂದು ಹಳ್ಳಿಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿದಿನ 500 ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿದಿನ ಕನಿಷ್ಠ 2000 ಮಂದಿಯ ಪರೀಕ್ಷೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಕುಮಾರ್, ಮುಖಂಡರಾದ ಶಿವಮಾದು, ನಿಜಾಮುದ್ದೀನ್ ಫೌಜ್ ದಾರ್, ರಂಗನಾಥ್, ನಗರಸಭಾ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.