
ಜೈಲು (ಪ್ರಾತಿನಿಧಿಕ ಚಿತ್ರ)
ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಡಿಎಆರ್ ಮೈದಾನದಲ್ಲಿ ಹತ್ತು ವರ್ಷದ ಹಿಂದೆ ಹಳೆ ದ್ವೇಷ ಮತ್ತು ಹಣದ ವಿಚಾರವಾಗಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ಅಪರಾಧಿಗೆ, ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಹತ್ತು ವರ್ಷ ಕಾರಾಗೃಹ ಶಿಕ್ಷೆ ಮತ್ತು ₹1.05 ಲಕ್ಷ ದಂಡ ವಿಧಿಸಿದೆ.
43 ವರ್ಷದ ಪ್ರಕಾಶ್ ಅಲಿಯಾಸ್ ಜಾನಿ ಶಿಕ್ಷೆಗೊಳಗಾದ ಅಪರಾಧಿ. 46 ವರ್ಷದ ಪ್ರಕಾಶ ಎಚ್.ಸಿ. ಕೊಲೆಯಾದವರು. ಜಾನಿ ಮತ್ತು ಪ್ರಕಾಶ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತು.
ಇದೇ ವಿಷಯಕ್ಕೆ ದ್ವೇಷ ಸಾಧಿಸುತ್ತಿದ್ದ ಜಾನಿ, 2015ರ ಫೆ. 22ರಂದು ಪ್ರಕಾಶ ಅವರು ಡಿಎಆರ್ ಮೈದಾನದಲ್ಲಿ ವಾಕಿಂಗ್ ಮುಗಿಸಿಕೊಂಡು ಮನೆಗೆ ಹೋಗುವಾಗ ಎದುರಿಗೆ ಬಂದು ಜಗಳ ತೆಗೆದಿದ್ದ. ಪರಸ್ಪರ ಮಾತಿಗೆ ಮಾತು ಬೆಳೆದಾಗ ಜಾನಿ, ಪ್ರಕಾಶ ಅವರ ಮರ್ಮಾಂಗಕ್ಕೆ ಒದ್ದು ಹಾಗೂ ಕೆನ್ನೆಗೆ ಬಲವಾಗಿ ಗುದ್ದಿದ್ದ.
ಹಲ್ಲೆಯಿಂದಾಗಿ ಕೆಳಕ್ಕೆ ಬಿದ್ದ ಪ್ರಕಾಶ ಅವರು ಕೆಳಕ್ಕೆ ಬೀಳುತ್ತಿದ್ದಂತೆ, ಜಾನಿ ಸ್ಥಳದಿಂದ ಕಾಲ್ಕಿತ್ತಿದ್ದ. ಪ್ರಕಾಶ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಈ ಕುರಿತು ಪ್ರಕಾಶ ಅವರ ಪತ್ನಿ ನೀಡಿದ ದೂರಿನ ಮೇರೆಗೆ, ಚನ್ನಪಟ್ಟಣ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಡಿವೈಎಸ್ಪಿ ಧನಂಜಯ ಅವರು, ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಂತಿಮ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯ ಅವರು, ಜಾನಿ ವಿರುದ್ದದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು ₹1.05 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಕರಣದ ವಿಶೇಷ ಅಭಿಯೋಜಕರಾಗಿ ವಿ.ಬಿ. ನಾಯಕ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.