ADVERTISEMENT

ನ್ಯಾಯಾಂಗದಲ್ಲೂ ಭ್ರಷ್ಟಾಚಾರ: ಸಂತೋಷ ಹೆಗ್ಡೆ

ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ‘ಯುವ ನುಡಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 14:22 IST
Last Updated 5 ಮಾರ್ಚ್ 2020, 14:22 IST
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 'ಯುವ ನುಡಿ' ಕಾರ್ಯಕ್ರಮಕ್ಕೆ ಮಹಿಳಾ ಅಧ್ಯಕ್ಷೆ ಶೈಲಜಾ ಚಾಲನೆ ನೀಡಿದರು. ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ ಹೆಗ್ಡೆ ಇದ್ದರು
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 'ಯುವ ನುಡಿ' ಕಾರ್ಯಕ್ರಮಕ್ಕೆ ಮಹಿಳಾ ಅಧ್ಯಕ್ಷೆ ಶೈಲಜಾ ಚಾಲನೆ ನೀಡಿದರು. ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ ಹೆಗ್ಡೆ ಇದ್ದರು   

ಮಾಗಡಿ: ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಜನರೆಲ್ಲರೂ ಮನಸ್ಸು ಮಾಡಿದರೆ ನಿಯಂತ್ರಿಸಬಹುದು ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

ಪಟ್ಟಣಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಾರ ನಡೆದ ‘ಯುವ ನುಡಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚುನಾಯಿತ ಪ್ರತಿನಿಧಿಗಳು ರಾಜ ಮಹಾರಾಜರಲ್ಲ. ಜನರಿಗೆ ಇಲ್ಲದ ಸವಲತ್ತು ಚುನಾಯಿತರಿಗೆ ಕೊಡುವುದು ನಿಲ್ಲಬೇಕು. ಜನರಿಂದ ಜನರಿಗಾಗಿ ಸರ್ಕಾರ ನಡೆಯಬೇಕಿದೆ. ಜನಪ್ರತಿನಿಧಿಗಳಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವು ಇರಬೇಕು ಎಂದು ಹೇಳಿದರು.

ADVERTISEMENT

ಸದನದ ಕಲಾಪದಲ್ಲಿ ಗದ್ದಲ ಮಾಡುವ ಜನಪ್ರತಿನಿಧಿಗಳಿಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ಅವರು, ಸಂವಿಧಾನ ಆಶಯವನ್ನು ಓದಬೇಕೆಂದು ಸಲಹೆ ನಿಡಿದರು.

ಲಂಚಕೊಟ್ಟು ನೌಕರಿಗೆ ಸೇರುವ ಜನರಿಂದ ಯಾವ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯ. ನ್ಯಾಯಾಂಗವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ವಿಳಂಬ ನ್ಯಾಯ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದೆ. ಹಣ ಪಡೆದು ಸುಳ್ಳುವರದಿ ಮಾಡುವ ಪತ್ರಿಕಾರಂಗವೂ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅಸಮಾ‌ಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮಾನವೀಯತೆ, ಶಾಂತಿ ಸೌಹಾರ್ದತೆ ಮೂಡಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಇಲ್ಲವಾದರೆ ಜವಾನ ಮಾಡಿದ ತಪ್ಪಿಗೆ ಯಜಮಾನ ಜವಾಬ್ದಾರನಾಗಬೇಕಿದೆ. ವೃತ್ತಿ ಸಿಗದಿದ್ದರೆ ನಿರಾಶರಾಗಬೇಡಿ. ಪೂರ್ವಿಕರು ನಡೆದು ಬಂದು ದಾರಿ ಒಮ್ಮೆ ಅವಲೋಕಿಸಿದರೆ ಸತ್ಯದ ಹಾದಿಯಲ್ಲಿ ನಡೆಯಬಹುದು. ವಿದ್ಯಾವಂತ, ನಿಸ್ವಾರ್ಥ, ಪ್ರಾಮಾಣಿಕರು ಜನಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಡಿವೈಎಸ್ಪಿ ಲಕ್ಷ್ಮೀನಾರಾಯಣ ಮಾತನಾಡಿ, ದಾರಿತಪ್ಪಿದ ಯುವಕರಿಂದ ಸಮಾಜದಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಯುವಜನರು ಶಿಸ್ತು ರೂಢಿಸಿಕೊಳ್ಳಬೇಕು ಎಂದರು.

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಮಾತನಾಡಿ, ವಿದ್ಯಾವಂತ ಯುವಕರು ರಾಜಕೀಯ ಪ್ರವೇಶಿಸಿ, ಸತ್ಯನಿಷ್ಠೆ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ, ಸಂವಿಧಾನದ ಆಶಯ ಎಲ್ಲರಿಗೂ ತಲುಪುವಂತೆ ಹೋರಾಟ ರೂಪಿಸಬೇಕಿದೆ ಎಂದರು.

ತಾಲ್ಲೂಕು ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯಲೋಕೇಶ್ ಮಾತನಾಡಿ, ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುವಂತೆ ಸಲಹೆ ನೀಡಿದರು.

ಪ್ರಭಾರ ಪ್ರಾಂಶುಪಾಲ ಪ್ರೊ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಕೃತಿ ಚಿಂತಕ ಎಸ್.ಸುನಿಲ್, ಕಾಲೇಜು ವಿದ್ಯಾರ್ಥಿ ಘಟಕದ ಅಧ್ಯಕ್ಷ ಗಿರಿಧರ ಎ.ಎಸ್, ಗೌರವಾಧ್ಯಕ್ಷ ಮಧುಗೌಡ, ಉಪಾಧ್ಯಕ್ಷ ಎಂ.ಜಿ.ಪ್ರಸಾದ್, ಮಹೇಶ್, ಕುಮಾರಸ್ವಾಮಿ, ಯೋಗೇಶ್, ಆನಂದ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.