
ರಾಮನಗರ: ‘ಜಿಲ್ಲಾ ತಂಬಾಕು ನಿಯಂತ್ರಣ ಕೋಶವು 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಇದುವರೆಗೆ 33 ಕಡೆ ಕಾರ್ಯಾಚರಣೆ ನಡೆಸಿ, ಕೋಟ್ಪಾ ಕಾಯ್ದೆಯಡಿ (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) 378 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮನ್ವಯ ಸಮಿತಿ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕಾಯ್ದೆ ಉಲ್ಲಂಘನೆಯಡಿ ₹44,350 ದಂಡ ವಿಧಿಸಲಾಗಿದೆ. ಅದೇ ರೀತಿ ಪ್ರತಿ ತಾಲ್ಲೂಕು ಕೇಂದ್ರಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಕಾರ್ಯಾಚರಣೆಗಳನ್ನು ನಡೆಸಿ, ಪ್ರಕರಣ ದಾಖಲು ಮಾಡಿ ದಂಡ ವಿಧಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳನ್ನು ಅಧಿಕೃತವಾಗಿ ಮಾರಾಟ ಮಾಡಲು ತಂಬಾಕು ಮಾರಾಟ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಪರವಾನಗಿ ಇಲ್ಲದೇ ಮಾರಾಟ ಮಾಡಿದರೆ ದಂಡ ವಿಧಿಸಬೇಕು’ ಎಂದು ಹೇಳಿದರು.
ಅರಿವು ಮೂಡಿಸಿ: ‘ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು, ಯುವಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು. ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
‘ಜಿಲ್ಲೆಯ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಈಗಾಗಲೇ ತಂಬಾಕು ಮುಕ್ತ ಗ್ರಾಮ ಎಂದು ಘೋಷಣೆಯಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಠ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವಾದರೂ ತಂಬಾಕು ಮುಕ್ತವಾಗಬೇಕು. ಈ ದಿಸೆಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಶ್ರಮಿಸಬೇಕು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿರುವ 1,529 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಘೋಷಿಸಲಾಗಿದೆ. ಸದರಿ ಶಾಲೆಗಳ ಆವರಣದಲ್ಲಿ ಧೂಮಪಾನ ನಿಷೇಧಿಸಿದೆ. ತಂಬಾಕು ಮುಕ್ತ ವಲಯ ಎಂಬ ಗೋಡೆ ಬರಹ ನಿಯಮಾನುಸಾರ ಬರೆಯಿಸಲಾಗಿದೆ’ ಎಂದು ಹೇಳಿದರು.
‘ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿದ 2025-2026ನೇ ಸಾಲಿನಲ್ಲಿ 90 ಶಾಲಾ ಹಾಗೂ ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಟಾ ಕಾಯ್ದೆ-2003ರ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥ ಮಾರಾಟ ಕಂಡುಬಂದರೆ ಕಾನೂನು ಕ್ರಮ ವಹಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿಯೂ ತಂಬಾಕು ಉತ್ಪನ್ನ ಮಾರಾಟವಾಗುವ ಬಗ್ಗೆ ಎಚ್ಚರ ವಹಿಸಬೇಕು. ಅಲ್ಲಿಯೂ ದಾಳಿ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ’ ಎಂದು ತಿಳಿಸಿದರು.
ಸಭೆ ಬಳಿಕ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದ್ದರು.
ತಂಬಾಕ ಉತ್ಪನ್ನಗಳನ್ನು ಅಧಿಕೃತವಾಗಿ ಮಾರಾಟ ಮಾಡಲು ಪರವಾನಗಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು –ಆರ್. ಚಂದ್ರಯ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
‘ಅಂಗಡಿ ಪರವಾನಗಿ ರದ್ಧುಪಡಿಸಿ’
‘ತಂಬಾಕು ಮಾರಾಟ ಪರವಾನಗಿ ಹಾಗೂ ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಕುರಿತಂತೆ ನಗರ ಹಾಗೂ ಗ್ರಾಮೀಣ ಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಂಡ ಸಂಗ್ರಹ ಪುಸ್ತಕ ನೀಡಲಾಗಿದೆ. ಕೋಟ್ಪಾ ಕಾಯ್ದೆಯಡಿ ಕಾರ್ಯಾಚರಣೆ ಕೈಗೊಂಡು ಪರವಾನಗಿ ಇಲ್ಲದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಬೇಕು. ಸಂಬಂಧಿಸಿದ ಮಳಿಗೆಯ ವ್ಯಾಪಾರ ಪರವಾನಿಗೆ ರದ್ದು ಮಾಡಲು ಕ್ರಮ ವಹಿಸಬೇಕು’ ಎಂದು ಆರ್. ಚಂದ್ರಯ್ಯ ಅವರು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.