ಮಾಗಡಿ: ಕೋವಿಡ್ ಲಸಿಕೆಯಿಂದ ಹೃದಯಘಾತ ಸಂಭವಿಸುತ್ತಿಲ್ಲ ಎಂಬುದನ್ನು ಸರ್ಕಾರವೇ ದೃಢಪಡಿಸಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಬಾಚೇನಟ್ಟಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಹಾನಾಡು ಕಟ್ಟೆಮನೆ, ಡಿ.ಕೆ.ಚಾರಿಟಬಲ್ ಟ್ರಸ್ಟ್, ಎಂ.ಎಸ್.ರಾಮಯ್ಯ ಆಸ್ಪತ್ರೆ ಸಹಯೋಗದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒತ್ತಡದಿಂದ ಹೃದಯಘಾತ ಸಂಭವಿಸುತ್ತಿದೆಯೇ ಹೊರತು ಲಸಿಕೆಯಿಂದಲ್ಲ ಎಂದರು.
ಜುಲೈ 27ರಿಂದ ಮಾಗಡಿಯಲ್ಲಿ 10 ದಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ವತಿಯಿಂದ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ. ಇತ್ತೀಚೆಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಮಹಿಳೆಯರು ಈ ತಪಾಸಣೆ ಮಾಡಿಕೊಳ್ಳಿ. ಕ್ಯಾನ್ಸರ್ ಇದ್ದರೆ ಗುಣಪಡಿಸಬಹುದು ಎಂದು ತಿಳಿಸಿದರು.
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ತಾಲ್ಲೂಕಿನಲ್ಲಿ 100 ಎಕರೆ ಜಾಗವನ್ನು ಗುರುತಿಸಿ ನಿವೇಶನ ರಹಿತ ಬಡವರಿಗೆ ಉಚಿತವಾಗಿ ನಿವೇಶನ ಹಂಚುವ ಕೆಲಸ ಮಾಡಲಾಗುತ್ತದೆ. ಬಾಚೇನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಎಕರೆ ಸರ್ಕಾರಿ ಜಾಗ ಗುರುತಿಸಿಕೊಟ್ಟರೆ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚಲಾಗುತ್ತದೆ. ಬಗರ್ ಹುಕುಂ ಅಡಿ ಹಕ್ಕುಪತ್ರ ವಿತರಿಸಲು ಒತ್ತಡ ಹಾಕಲಾಗುತ್ತದೆ. ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ ಮಾಡಿದ್ದು ಎ ಮತ್ತು ಬಿ ಖಾತೆ ವಿತರಣೆ ಮಾಡಲಾಗುತ್ತದೆ ಎಂದರು.
ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಕೆಂಚೇಗೌಡ, ಶಾಂತ ಬಾಯಿ ಧನಂಜಯ ನಾಯಕ್, ಚಂದ್ರಶೇಖರ್, ಶಿವಮೂರ್ತಿ, ಕಲ್ಲೂರು ರಂಗನಾಥ್, ಪುಟ್ಟರಾಜು ಯಾದವ್, ಮಾರುತಿ ಯಾದವ್, ಬಾಳೇಗೌಡ, ಅಶ್ವತ್, ರೂಪೇಶ್, ಸಿದ್ದಪ್ಪ, ಪೋಟೋ ಲಕ್ಷ್ಮೀಪತಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಗ್ರಾ.ಪಂ.ವಾಟರ್ ಮ್ಯಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.