ADVERTISEMENT

ನಾಟಿ ತಳಿ ಹಸುಗಳ ಸಂಖ್ಯೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 13:05 IST
Last Updated 16 ಜನವರಿ 2020, 13:05 IST
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದನಗಳ ಜಾತ್ರೆಯಲ್ಲಿ ಸೇರಿರುವ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು 
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದನಗಳ ಜಾತ್ರೆಯಲ್ಲಿ ಸೇರಿರುವ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು    

ಚನ್ನಪಟ್ಟಣ: ಹೈನೋದ್ಯಮದ ಮುನ್ನಡೆ ಹಾಗೂ ಯಾಂತ್ರೀಕರಣದಿಂದಾಗಿ ನಾಟಿ ತಳಿ ಹಸುಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ ಎಂದು ಸಾಹಿತಿ ವಿಜಯ್ ರಾಂಪುರ ವಿಷಾದಿಸಿದರು.

ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಗುರುವಾರ ನಡೆದ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ದನಗಳ ಜಾತ್ರೆಗೆ ಸೇರಿರುವ ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರೈತ ಸಮುದಾಯದ ಕಷ್ಟಸುಖಗಳ ಅರಿವಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು 1958ರಲ್ಲಿ ಶ್ರೀ ಕೆಂಗಲ್ ಕ್ಷೇತ್ರದಲ್ಲಿ ದನಗಳ ಜಾತ್ರೆ ಆರಂಭಿಸುವ ಮೂಲಕ ನಾಟಿ ರಾಸುಗಳ ವ್ಯಾಪಾರ ವಿನಿಮಯದ ವಹಿವಾಟಿಗೆ ವೇದಿಕೆ ಕಲ್ಪಿಸಿದರು. ಕಷ್ಟದ ಸನ್ನಿವೇಶಗಳಲ್ಲಿಯೂ ಅಪರೂಪದ ತಳಿಗಳ ರಕ್ಷಣೆಗೆ ಮುಂದಾಗಿ, ಇಂದಿಗೂ ಗ್ರಾಮೀಣ ಸೊಗಡನ್ನು ಪೋಷಿಸಿಕೊಂಡು ಬರುತ್ತಿರುವ ರೈತ ಸಮುದಾಯದ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ರೈತರನ್ನು ಪ್ರೋತ್ಸಾಹಿಸಬೇಕಾದುದು ನಮ್ಮೆಲ್ಲರ ಹೊಣೆಯಾಗಬೇಕು’ ಎಂದರು.

ADVERTISEMENT

ರೈತ ಸುಳ್ಳೇರಿ ತಮ್ಮಣ್ಣ ಮಾತನಾಡಿ, ‘ನಾಟಿ ಹಸುಗಳ ಸಂರಕ್ಷಣೆ ಮಾಡುತ್ತಿರುವ ರೈತ ಕುಟುಂಬಗಳಿಗೆ ಪ್ರೋತ್ಸಾಹ ಧನ ನೀಡಬೇಕು. ಲಾಭದಾಯಕವಲ್ಲದ ನಾಟಿ ಹಸುಗಳನ್ನು ಸಾಕುವ ಮೂಲಕ, ಇಂದಿಗೂ ಪರಂಪರಾನುಗತ ಒಕ್ಕಲು ಸಂಸ್ಕೃತಿಯನ್ನು ಉಳಿಸಿಕೊಂಡಿದ್ದೇವೆ’ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ್ ಮಾತನಾಡಿ, ‘ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರೆಗೆ ಹೊರರಾಜ್ಯಗಳ ರೈತರು ರಾಸುಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಇದು ಅತ್ಯಂತ ಸಂತಸದ ಸಂಗತಿ. ಇಲ್ಲಿನ ಹಸುಗಳಿಗೆ ಭಾರೀ ಬೇಡಿಕೆ ಇದ್ದು, ನಾಟಿ ಹಸುಗಳ ಉಳಿವಿಗೆ ಸರ್ಕಾರ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಮ್ಮ ಸಂಸ್ಕೃತಿ ಉಳಿವಿಗೆ ಮುಂದಾಗಲಿ’ ಎಂದರು.

ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ ಅವರು ವಿಜೇತ ರೈತರಿಗೆ ಬಹುಮಾನ ವಿತರಿಸಿದರು.

ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ ಸುಗ್ಗಿ ಗೀತೆಗಳನ್ನು ಹಾಡಿದರು. ಯುವ ಕವಿಗಳಾದ ಅಬ್ಬೂರು ಶ್ರೀನಿವಾಸ್, ತುಂಬೇನಹಳ್ಳಿ ಕಿರಣ್ ರಾಜ್, ಮಂಗಳವಾರಪೇಟೆ ಮಂಜುನಾಥ್ ಹಾಜರಿದ್ದರು.

ಸುಳ್ಳೇರಿ ಗ್ರಾಮದ ಬ್ಯಾಂಕ್ ತಮ್ಮಣ್ಣ ಅವರ ಹಸು ಮತ್ತು ಕರು ಪ್ರಥಮ ಸ್ಥಾನ, ಲಂಬಾಣಿ ತಾಂಡ್ಯದ ಬಾಲು ನಾಯ್ಕರ ಬಿತ್ತನೆ ಹೋರಿಗೆ ದ್ವಿತೀಯ ಸ್ಥಾನ ಹಾಗೂ ಚಳ್ಳಕೆರೆ ತಾಲ್ಲೂಕು ಅರವಿಗೊಂಡನಹಳ್ಳಿಯ ಯೋಗಾನಂದ ಮೂರ್ತಿ ಅವರ ಗಿರ್ ತಳಿಗೆ ತೃತೀಯ ಬಹುಮಾನ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.