ಚನ್ನಪಟ್ಟಣ: ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಶೀಘ್ರ ಕ್ರಮವಹಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು.
ನಗರದ ಶತಮಾನೋತ್ಸವ ಭವನದಲ್ಲಿ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಡಾ.ರಾಜ್ ಬಳಗ ವತಿಯಿಂದ ಈಚೆಗೆ ಆಯೋಜಿಸಿದ್ದ ದಕ್ಷ ಯಜ್ಞ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರಾಣಿಕ ನಾಟಕಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬ. ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಆಧುನಿಕತೆ ನಡುವೆ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ. ಇಂತಹ ನಾಟಕಗಳಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು.
ಗೌಡಗೆರೆ ಚಾಮುಂಡೇಶ್ವರಿ ಬಸಪ್ಪನ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಮಾತನಾಡಿ, ಆಧುನಿಕತೆ, ಪಾಶ್ಚತ್ಯ ಸಂಸ್ಕೃತಿ ಹಾಗೂ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ನಾಡಿನ ವೈಭವ ಮತ್ತು ಇತಿಹಾಸ ತಿಳಿಸುವಂತಹ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಕಣ್ಮರೆಯಾಗುತ್ತಿದೆ. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕಲಾವಿದ ಎಲೆಕೇರಿ ಮಂಜುನಾಥ್ ಅವರಿಗೆ ಬೊಂಬೆನಾಡು ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಕಲಾವಿದರಾದ ಗೋಪಾಲಗೌಡ, ರಾಂಪುರ ಮರಿಯಪ್ಪ, ಡಾ.ವಾಸುದೇವ್, ಎಲೆಕೇರಿ ನಾಗರಾಜು, ಎಸ್.ಎಂ.ರಾಜು, ಗೋವಿಂದಹಳ್ಳಿ ನಾಗರಾಜು, ಸುಮತಿ ಕುಮಾರ್ ಜೈನ್, ನಾಗವಾರ ಶಂಭುಗೌಡ, ಶಿವಲಿಂಗಯ್ಯ, ಎಂಟಿಆರ್ ತಿಮ್ಮರಾಜು, ಕೂಡ್ಲೂರು ವೆಂಕಟೇಶ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಚಕ್ಕೆರೆ ವಿಜೇಂದ್ರ, ಗುರುಮಾದಯ್ಯ, ಎಲೆಕೇರಿ ರವೀಶ್, ರಾಂಪುರ ರಾಜಣ್ಣ, ಲಕ್ಷ್ಮಣ್, ಪುಟ್ಟಸ್ವಾಮಿಗೌಡ, ವಸಂತ ಕುಮಾರ್, ಮಹೇಶ್ ಕುಮಾರ್, ಬಿ.ಕೆ. ತೇಜಸ್, ಯೋಗೇಶ್ ಚಕ್ಕೆರೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.