ADVERTISEMENT

ಜಾಲತಾಣದಲ್ಲಿ ಸಿಪಿವೈ–ಡಿಕೆಶಿ ಬೆಂಬಲಿಗರ ಹಗ್ಗಜಗ್ಗಾಟ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:25 IST
Last Updated 8 ಫೆಬ್ರುವರಿ 2020, 12:25 IST

ರಾಮನಗರ: ಡಿ.ಕೆ. ಶಿವಕುಮಾರ್ ಹಾಗೂ ಸಿ.ಪಿ. ಯೋಗೇಶ್ವರ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದು ಈಚೆಗೆ ಸಾಮಾನ್ಯವಾಗಿದೆ. ಇದೀಗ ಸಚಿವ ಸ್ಥಾನದ ವಿಚಾರದಲ್ಲೂ ಈ ಚರ್ಚೆ ಜೋರಾಗಿದೆ.

ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಚನ್ನಪಟ್ಟಣದ ರಸ್ತೆಗಳು, ವೃತ್ತಗಳಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟಿದ್ದರು. ಆದರೆ ಸಚಿವ ಸ್ಥಾನ ಮಾತ್ರ ಸಿಗಲಿಲ್ಲ. ಇದನ್ನೇ ಬಳಸಿಕೊಂಡ ಡಿಕೆಶಿ ಅಭಿಮಾನಿಗಳು ಫ್ಲೆಕ್ಸ್‌ಗಳ ಫೋಟೊಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ವ್ಯಂಗ್ಯಮಾಡಿದ್ದಾರೆ.

ಯೋಗೇಶ್ವರ್‌ ಅಭಿಮಾನಿಗಳು ಇದನ್ನು ನೋಡಿಕೊಂಡು ಸುಮ್ಮನಾಗಿಲ್ಲ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕೇ ಬಿಟ್ಟಿತು ಎಂದು ಭಾವಿಸಿ ಶುಭ ಕೋರಿ ಹಾಕಲಾಗಿದ್ದ ಪೋಸ್ಟ್‌ಗಳನ್ನು ನೆನಪು ಮಾಡಿದ್ದಾರೆ. ಈ ಮೂಲಕ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ.

ಯೋಗೇಶ್ವರ್‌ರ ಗಣವೇಷದ ಕುರಿತು ಚರ್ಚೆ ನಡೆದಿದೆ. ಇದು ದೇಶಾಭಿಮಾನದ ಪ್ರತೀಕ ಎಂದು ಸಿಪಿವೈ ಅಭಿಮಾನಿಗಳು ಪೋಸ್ಟ್‌ ಹಾಕಿದ್ದಾರೆ. ಇದಕ್ಕೆ ಅವರ ಕಾಲೆಳೆದಿರುವ ಡಿಕೆಶಿ ಬೆಂಬಲಿಗರು, ಆಗೆಲ್ಲ ಇಲ್ಲದ ಅಭಿಮಾನ ಈಗ ದಿಢೀರ್ ಜಾಗೃತವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮರು ಉತ್ತರ ನೀಡಿರುವ ಸಿಪಿವೈ ಬೆಂಬಲಿಗರು ‘ಡಿಕೆಶಿಗೆ ದಿಢೀರ್ ಎಂದು ಯೇಸುವಿನ ಕನವರಿಕೆ ಆಗಿದ್ದು ಏಕೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.