ADVERTISEMENT

ನಂಬಿಕೆ, ವಿಶ್ವಾಸ ಉಳಿಸಿಕೊಂಡ ಸ್ತ್ರೀಶಕ್ತಿ ಸಂಘಗಳು

ಕನಕಪುರದಲ್ಲಿ ಸಮುದಾಯ ಬಂಡವಾಳ ನಿಧಿ ವಿತರಣೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:36 IST
Last Updated 10 ಫೆಬ್ರುವರಿ 2020, 14:36 IST
ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಸಂಜೀವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಯರು
ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಸಂಜೀವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಯರು   

ಕನಕಪುರ: ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾದಾಗ ಮಾತ್ರ ಸಾಮಾಜಿಕವಾಗಿ ಸುಧಾರಣೆ ಸಾಧಿಸಲು ಸಾಧ್ಯ ಎಂದು ಸಂಸದ ಡಿ.ಕೆ.ಸುರೇಶ್‌ ಅಭಿಪ್ರಾಯಟ್ಟರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ 'ಸಂಜೀವಿನಿ' ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ತಾಲ್ಲೂಕು ಪಂಚಾಯಿತಿ ಹಾಗೂ 'ಸಂಜೀವಿನಿ' ಒಕ್ಕೂಟಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಮುದಾಯ ಬಂಡವಾಳ ನಿಧಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಸುಸ್ಥಿರ ಸಮಾಜವಾಗಬೇಕಾದರೆ ಪ್ರಮುಖವಾಗಿ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲವರ್ಧನೆಗೊಳ್ಳಬೇಕು. ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ 'ಸಂಜೀವಿನಿ' ಯೋಜನೆಯಡಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ADVERTISEMENT

ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಮಾತ್ರ ಬಡತನ ನೀಗಿಸಲು ಸಾಧ್ಯ. ಸ್ವ ಉದ್ಯೋಗ ಕಲ್ಪಿಸಿದಾಗ ಮಾತ್ರ ಬದಲಾವಣೆ ಸಾಧ್ಯ. ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಕ್ಕೂಟಗಳ ರಚನೆ ಮಾಡಲಾಗಿದೆ. ಅದರ ಮೂಲಕ ಸರ್ಕಾರ ಮೂಲ ಬಂಡವಾಳ ಹಣವನ್ನು ಗುಂಪುಗಳಿಗೆ ನೀಡುತ್ತದೆ. ಅದರಲ್ಲಿ ಗುಂಪಿನ ಮಹಿಳೆಯರು ಸಾಲ ಪಡೆದು ಸ್ವ ಉದ್ಯೋಗ, ಗುಂಪು ಉದ್ಯೋಗ ಮತ್ತಿತರ ಆದಾಯ ಬರುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಸ್ತ್ರೀಶಕ್ತಿ ಸಂಘಗಳ ಮೂಲಕ ಸ್ವ–ಉದ್ಯೋಗ ಮಾಡಲು ಕೌಶಲ ತರಬೇತಿ ನೀಡಲಾಗುತ್ತಿದೆ. ಮನೆಯಲ್ಲಿಯೇ ಇದ್ದುಕೊಂಡು ಉದ್ಯೋಗ ಮಾಡಬಹುದಾಗಿದೆ. ಈಗ ಗ್ರಾಮೀಣ ಭಾಗದ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ. ಸಾವಯವ ಕೃಷಿ, ಸಿರಿಧಾನ್ಯ ಬೇಸಾಯ, ಕೋಳಿ, ಕುರಿ ಮತ್ತು ಮೇಕೆ, ಹಸು ಸಾಕಾಣಿಕೆ ಸುಲಭವಾಗಿ ಮಾಡಬಹುದಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ವಲಸೆ ಬರುವ ಬದಲು, ಇಲ್ಲೇ ಇದ್ದು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯೋಜನೆಯಲ್ಲಿ ತೆಗೆದುಕೊಳ್ಳುವ ಹಣ ಆದಾಯ ಬರುವ ಉದ್ಯಮಕ್ಕೆ ಬಳಸಿ ಸರಿಯಾಗಿ ಮರುಪಾವತಿಸಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮಾತನಾಡಿ, ಸ್ತ್ರೀಶಕ್ತಿ ಸಂಘಟನೆಯನ್ನು ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಮೋಟಮ್ಮ ಅವರು ಪ್ರಾರಂಭಿಸಿದರು. ಅದಕ್ಕೆ ಮಹಿಳಾ ಸಂಘಟನೆಯೆಂದು ಕರೆಯಬೇಕೆಂದಾಗ ಡಿ.ಕೆ.ಶಿವಕುಮಾರ್‌ ಅವರೇ ಸ್ತ್ರೀಶಕ್ತಿ ಮಹಿಳಾ ಸಂಘಟನೆಯೆಂದು ಹೆಸರಿಟ್ಟರು ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘ ಹೆಮ್ಮರವಾಗಿ ಬೆಳೆದಿದೆ. ಒಳ್ಳೆಯ ಉದ್ದೇಶದೊಂದಿಗೆ ಕೆಲಸ ಮಾಡುತ್ತಾ ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಎಷ್ಟೋ ಕುಟುಂಬಗಳ ಮಹಿಳೆಯರ ಮೇಲೆ ಅವಲಂಬಿತವಾಗಿದೆ. ಈಗ ಸಂಜೀವಿನ ಯೋಜನೆಯಲ್ಲಿ ಸರ್ಕಾರದಿಂದ ಬರುತ್ತಿರುವ ಹಣ ನೇರವಾಗಿ ಮಹಿಳೆಯರಿಗೆ ನೀಡದೆ ಸ್ತ್ರೀಶಕ್ತಿ ಗುಂಪುಗಳ ಮೂಲಕವೇ ಕೊಡಲಾಗುತ್ತಿದೆ. ಆ ಮಟ್ಟದಲ್ಲಿ ಸ್ತ್ರೀಶಕ್ತಿ ಸಂಘಟನೆಗಳು ಕಾರ್ಯದಕ್ಷತೆಯಿಂದ ಕೆಲಸ ಮಾಡಿ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಂಡಿವೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭೈರೇಗೌಡ, ಉಪಾಧ್ಯಕ್ಷೆ ಅನ್ನಪೂರ್ಣ ಸೋಮಶೇಖರ್‌, ಸುಕನ್ಯ ರಂಗಸ್ವಾಮಿ, ಕಾಳಪ್ಪ, ಯೋಜನೆ ಅನುಷ್ಠಾನದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.