ADVERTISEMENT

ರಾಮನಗರ: ನೌಕರಿ ಕಾಯಂ ಹೆಸರಲ್ಲಿ ₹26 ಲಕ್ಷ ವಂಚನೆ

ಕಾಯಂ ಆಸೆಗೆ ಹಣ ಕೊಟ್ಟು ಕೈ ಸುಟ್ಟುಕೊಂಡ ಹೊರಗುತ್ತಿಗೆ ನೀರು ಸರಬರಾಜು ನೌಕರರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ರಾಮನಗರ: ನೌಕರಿ ಕಾಯಂಗೊಳಿಸುವ ಆಸೆ ತೋರಿಸಿದ ವ್ಯಕ್ತಿಗಳಿಬ್ಬರು, ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದ ಅಮಾಯಕ ನೌಕರರಿಂದ ಸುಮಾರು ₹26.25 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಇದೀಗ, ಇತ್ತ ಕೆಲಸ ಕಾಯಂ ಮಾಡಿಸದೆ, ಅತ್ತ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ.

ರಾಮನಗರದಲ್ಲಿ ನೀರು ಸರಬರಾಜು ನೌಕರರಾಗಿ ಕೆಲಸ ಮಾಡುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ನೌಕರಿ ಕಾಯಂಗಾಗಿ ಹಣ ಕೊಟ್ಟು ಕೈ ಸುಟ್ಟುಕೊಂಡವರು.

ADVERTISEMENT

ವಂಚನೆ ಕುರಿತು ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಜ. 20ರಂದು ವಸಂತಕುಮಾರ್ ಆರ್‌.ಸಿ ಸೇರಿದಂತೆ ಸುಮಾರು 35 ನೌಕರರು ದೂರು ಕೊಟ್ಟಿದ್ದಾರೆ. ಆ ಮೇರೆಗೆ, ಬೆಂಗಳೂರಿನ ಜ್ಞಾನಭಾರತಿಯ ಲೋಕೇಶ್ ಎಂ.ಪಿ ಮತ್ತು ಮಂಡ್ಯದಲ್ಲಿ ನೀರಗಂಟಿಯಾಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

2021ರ ಮಾರ್ಚ್ ತಿಂಗಳಲ್ಲಿ ದೂರುದಾರರಿಗೆ ಬೆಂಗಳೂರಿನ ಲೋಕೇಶ್ ಅವರನ್ನು ಪರಿಚಯಿಸಿದ್ದ ಆರೋಪಿ ವೆಂಕಟೇಶ್, ಹೊರಗುತ್ತಿಗೆ ನೌಕರರ ಕಾಯಂ ಸೇರಿದಂತೆ ಏನು ಕೆಲಸ ಬೇಕಾದರೂ ಮಾಡಿಸಿ ಕೊಡುತ್ತಾರೆ ಎಂದು ಬಿಲ್ಡಪ್ ಕೊಟ್ಟಿದ್ದರು. ಇದಾದ ಬಳಿಕ ದೂರುದಾರರ ನೇತೃತ್ವದಲ್ಲಿ ನೌಕರರು ಲೋಕೇಶ್ ಭೇಟಿ ಮಾಡಿದ್ದರು.

ಆಗ, ನೌಕರಿ ಕಾಯಂ ಜೊತೆಗೆ ಸೂಕ್ತ ವೇತನ ಕೊಡಿಸುವುದಾಗಿ ಲೋಕೇಶ್ ಭರವಸೆ ನೀಡಿದ್ದ. ಕೆಲಸ ಮಾಡಿಕೊಡಲು ಪ್ರತಿಯೊಬ್ಬರು ತಲಾ ₹60 ಸಾವಿರವನ್ನು ಆದಷ್ಟು ಬೇಗ ಕೊಡಬೇಕು ಎಂದು ಷರತ್ತು ಹಾಕಿದ್ದ. ಅದರಂತೆ, ನೌಕರರು ಹಣ ಹೊಂದಿಸಿ ಕೊಟ್ಟಿದ್ದರು. ಇದಾದ ಒಂದು ತಿಂಗಳ ಬಳಿಕ ನೌಕರರನ್ನು ಮತ್ತೆ ಸಂಪರ್ಕಿಸಿದ್ದ ಲೋಕೇಶ್, ನಿಮ್ಮ ಕೆಲಸ ಕಾಯಂ ಆಗುವ ಹಂತದಲ್ಲಿದ್ದು ಹೆಚ್ಚುವಾಗಿ ಎಲ್ಲರೂ ತಲಾ ₹15 ಸಾವಿರ ಕೊಡಿ ಎಂದಿದ್ದ. ನೌಕರರು ಮತ್ತೆ ಹಣ ಸಂಗ್ರಹಿಸಿ ₹5.25 ಲಕ್ಷ ಕೊಟ್ಟಿದ್ದರು. ಕೆಲಸ ಕಾಯಂ ಹೆಸರಿನಲ್ಲಿ ಆತ ಒಟ್ಟು ₹26.25 ಲಕ್ಷ ಪಡೆದಿದ್ದ.

ನೆಪ ಹೇಳಿ ನುಣುಚಿಕೊಳ್ಳುತ್ತಿದ್ದ: ಹಣ ಕೊಟ್ಟರೂ ಸಕಾಲದಲ್ಲಿ ಕೆಲಸ ಕಾಯಂ ಆಗದಿರುವ ಕುರಿತು ನೌಕರರು, ಲೋಕೇಶ್‌ಗೆ ವಿಚಾರಿಸಿದ್ದರು. ಆಗ ಆತ, ನಿಮ್ಮ ಕೆಲಸವನ್ನೇ ಮಾಡುತ್ತಿದ್ದೇನೆ. ಸ್ವಲ್ಪ ತಡವಾಗಲಿದೆ, ಕಾಯಿರಿ ಎಂದು ನೆಪ ಹೇಳಿದ್ದ. ಕರೆ ಮಾಡಿದಾಗ ಮತ್ತು ಖುದ್ದು ಭೇಟಿ ಮಾಡಿದಾಗಲೆಲ್ಲಾ, ಸ್ವಲ್ಪ ದಿನದ್ಲಲಿ ಕೆಲಸವಾಗಲಿದೆ ಎಂದು ಹಾರಿಕೆ ಉತ್ತರ ಕೊಡುತ್ತಾ ನುಣುಚಿಕೊಳ್ಳುತ್ತಿದ್ದ ಎಂದು ದೂರುದಾರರು ತಿಳಿಸಿದ್ದಾರೆ.

ನೌಕರಿ ಕಾಯಂ ಮಾಡಿಸುವುದಾಗಿ ಹೇಳಿ ಹೊರಗುತ್ತಿಗೆ ನೌಕರರಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರ ಪುರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.